ಮಡಿಕೇರಿ ಸೆ.10 NEWS DESK : ಬ್ರಿಟಿಷ್ ಅಧಿಕಾರಿಗಳು ಭೇಟಿ ಮಾಡಿದ ಜ್ಞಾಪಕಾರ್ಥವಾಗಿ ವಿರಾಜಪೇಟೆ ಎಂದು ಅಂದು ನಾಮಕರಣಗೊಂಡ ವಿರಾಜಪೇಟೆಯನ್ನು ಮೂಲ ಹೆಸರಿನ ಮೂಲಕ ಅಧಿಕೃತವಾಗಿ ಗುರುತಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ಒತ್ತಾಯಿಸಿದ್ದಾರೆ. ಈ ಕುರಿತು ವಿರಾಜಪೇಟೆ ಕ್ಷೇತ್ರದ ಶಾಸಕರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸುಮಾರು 18ನೇ ಶತಮಾನದ ನಂತರ ಈಗ ಇರುವ ಪುರಕ್ಕೆ ಅಂದಿನ ಕೊಡಗು ಆಡಳಿತಗಾರರನ್ನು ಬ್ರಿಟಿಷ್ ಅಧಿಕಾರಿಗಳು ಭೇಟಿ ಮಾಡಿದ ಜ್ಞಾಪಕಾರ್ಥವಾಗಿ ವಿರಾಜಪೇಟೆ ಎಂದು ಹೆಸರು ನೀಡಲಾಯಿತು. ಇದಕ್ಕೂ ಮೊದಲು ಈ ಪಟ್ಟಣಕ್ಕೆ ಬೇರೆಯದ್ದೇ ಹೆಸರಿತ್ತು ಎನ್ನುವುದು ಹಿರಿಯರ ವಾದವಾಗಿದೆ. ಜನರ ಭಾವನೆಗಳಿಗೆ ದಕ್ಕೆಯಾಗದಂತೆ ಸ್ಪಂದಿಸುವುದರೊಂದಿಗೆ ತಪ್ಪು ಸಂದೇಶವನ್ನು ದೂರ ಮಾಡಬೇಕು. ಇತಿಹಾಸ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿ ಸರಿಯಾದ ವರದಿಯನ್ನು ಪ್ರಸ್ತುತಪಡಿಸಿ ಸರ್ಕಾರದ ವತಿಯಿಂದ ಮತ್ತೆ ಮೂಲ ಹೆಸರಿಗೆ ಬದಲಾವಣೆ ಮಾಡಬೇಕು ಎಂದು ಭೋಜಣ್ಣ ಸೋಮಯ್ಯ ಮನವಿ ಮಾಡಿದ್ದಾರೆ. ಈ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಜನರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.










