ಮಡಿಕೇರಿ NEWS DESK ಸೆ.10 : ಮಡಿಕೇರಿಯ ವಿಂಗ್ಸ್ ಆಫ್ ಪ್ಯಾಶನ್ ಡ್ಯಾನ್ಸ್ ಸ್ಟುಡಿಯೋ 5ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿತು. ಸಂಸ್ಥೆಯ ಸ್ಥಾಪಕರು, ನಿರ್ದೇಶಕರು ಹಾಗೂ ನೃತ್ಯ ಸಂಯೋಜಕರಾದ ಪ್ರೀತಾ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜ್ ನ ಉಪನ್ಯಾಸಕರಾದ ಜಯಲಕ್ಷ್ಮಿ ಕೆ. ಅವರು ಮನಸ್ಸು ಮತ್ತು ದೇಹದ ಸದೃಢತೆಗೆ ನೃತ್ಯ ಸಹಕಾರಿಯಾಗಿದೆ ಎಂದರು. ನಿಷ್ಠೆಯೊಂದಿಗೆ ಕಠಿಣ ಪರಿಶ್ರಮದಿಂದ ಮಕ್ಕಳು ಹಾಗೂ ಮಹಿಳೆಯರಲ್ಲಿ ಜೀವನೋತ್ಸಾಹ ತುಂಬುತ್ತಿರುವ ಪ್ರೀತಾ ಕೃಷ್ಣ ಅವರ ಸಾಧನೆ ಶ್ಲಾಘನೀಯ ಮತ್ತು ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಂಗ್ಸ್ ಆಫ್ ಪ್ಯಾಶನ್ ಡ್ಯಾನ್ಸ್ ಸ್ಟುಡಿಯೋದ ಸಂಗೀತ ಗುರುಗಳಾದ ಹರಿಚಂದ್ರ ಮಾತನಾಡಿ ಸಂಗೀತದ ಪ್ರಕಾರಗಳ ಬಗ್ಗೆ ವಿವರಿಸಿದರು.
::: ಬಹುಮಾನ ವಿತರಣೆ :::
“ವೈಟ್ ಲಾಸಿಂಗ್ ಮಂತ್” ಸ್ಪರ್ಧೆಯಲ್ಲಿ ವಿಜೇತರಾದ ಚೇತನಾ ಪೂಜಾರಿ ಹಾಗೂ ಪ್ರತಿಮಾ ಅವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
::: ನೃತ್ಯ ವೈವಿಧ್ಯ :::
ಸಂಸ್ಥೆಯ ವಿದ್ಯಾರ್ಥಿಗಳು ವಿಭಿನ್ನ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ನೃತ್ಯ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪರವಾಗಿ ಕಿರು ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿನಿ ರುಷಿಕಾ ಸ್ವಾಗತಿಸಿ, ನಿರೂಪಿಸಿ, ಪ್ರೀತಾ ಕೃಷ್ಣ ವಂದಿಸಿದರು. ವಿದ್ಯಾರ್ಥಿಗಳು, ಪೋಷಕರು ಹಾಗೂ ಫಿಟ್ನೆಸ್ ತರಬೇತಿಯ ಎಲ್ಲಾ ಮಹಿಳೆಯರು ಉಪಸ್ಥಿತರಿದ್ದರು.












