ಮಡಿಕೇರಿ ಸೆ.11 NEWS DESK : ಕತ್ತಲೆಕಾಡು, ಜೇನುಕೊಲ್ಲಿ ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ 18ನೇ ವರ್ಷದ ಗೌರಿ-ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತ್ ಮಾತಾ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿ ಗಣೇಶ ಮೂರ್ತಿಯನ್ನು ಟ್ರಸ್ಟ್ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಜೆ ಸ್ಥಳೀಯ ವಿದ್ಯಾರ್ಥಿಗಳು, ಸ್ಥಳೀಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಿತು. ಮಡಿಕೇರಿಯ ರಾಮಾಂಜನೇಯ ಭಜನಾ ಮಂಡಳಿ ಸದಸ್ಯರು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಮಹಾಪೂಜೆ ಬಳಿಕ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಬಳಿಕ ಕ್ಲೋಸ್‌ಬರ್ನ್ ಕೆರೆಯಲ್ಲಿ ವಿಸರ್ಜಿಸಲಾಯಿತು. ಬಿಡುವು ನೀಡದೆ ಸುರಿದ ಮಳೆಯ ನಡುವೆಯೂ ಸಾರ್ವಜನಿಕರು ಅತ್ಯುತ್ಸಾಹದಿಂದ ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅಬ್ಬರದ ಸಂಗೀತಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಅರ್ಚಕ ಯೋಗೇಶ್ ಭಟ್ ಪೂಜಾ ಕಾರ್ಯ ನಡೆಸಿಕೊಟ್ಟರು. ಟ್ರಸ್ಟ್ ಅಧ್ಯಕ್ಷ ಹೊನ್ನಪ್ಪ, ಉಪಾಧ್ಯಕ್ಷ ಚಂದ್ರಶೇಖರ ರೈ, ಕಾರ್ಯದರ್ಶಿ ಬ್ರಿಜೇಶ್ ಖಜಾಂಚಿ ನವೀನ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ, ಖಜಾಂಚಿ ಸತೀಶ್ ರೈ, ಸಹ ಖಜಾಂಚಿ ಜಯಪ್ರಕಾಶ್, ಕಾರ್ಯದರ್ಶಿ ರಾಜೇಶ್, ಮಾಜಿ ಅಧ್ಯಕ್ಷ ಲೋಕೇಶ್ ರೈ, ಮಹಿಳಾ ಘಟಕ, ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.