ಕೂಡಿಗೆ ಸೆ.11 NEWS DESK : ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವರ್ಷಗಳು ಸಂದ ಹಿನ್ನೆಲೆಯಲ್ಲಿ “ಕರ್ನಾಟಕ ಸುವರ್ಣ ಸಂಭ್ರಮ:50” ರ ಅಂಗವಾಗಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಹಾಗೂ ವಿವಿಧ ಶಾಲಾ- ಕಾಲೇಜುಗಳ ವತಿಯಿಂದ ಕೂಡಿಗೆ ವೃತ್ತದಲ್ಲಿ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಸೋಮವಾರಪೇಟೆ ತಾಲ್ಲೂಕಿನಿಂದ ಕುಶಾಲನಗರ ತಾಲ್ಲೂಕಿಗೆ ಆಗಮಿಸಿದ ಕನ್ನಡ ರಥವನ್ನು ಗ್ರಾ.ಪಂ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ರಥಕ್ಕೆ ಪುಷ್ಪ ಅರ್ಪಿಸಿ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ಕನ್ನಡ ನಾಡು- ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವ ಈ ರಥವು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿದಿದೆ. ನಾವೆಲ್ಲರೂ ಕನ್ನಡ ನಾಡು- ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯಲು ಪಣ ತೊಡಬೇಕು ಎಂದು ಮನವಿ ಮಾಡಿದರು. ಕರ್ನಾಟಕ ಸುವರ್ಣ ಸಂಭ್ರಮದ ಮಹತ್ವ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ‘ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ 10 ತಿಂಗಳ ಹಿಂದೆ ಹಂಪಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯು ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಿದ್ದು, ಕೊಡಗು ಜಿಲ್ಲೆಯಲ್ಲಿಯೂ ಈ ಕನ್ನಡ ರಥಕ್ಕೆ ಎಲ್ಲೆಡೆ ಅದ್ದೂರಿ ಸ್ವಾಗತ ಮಾಡಿಕೊಳ್ಳಲಾಗುತ್ತಿದೆ ಎಂದರು. ರಾಜ್ಯದೆಲ್ಲೆಡೆ ಸಂಚರಿಸುತ್ತಿರುವ ಕನ್ನಡ ರಥವು ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಇತಿಹಾಸ, ಪರಂಪರೆ, ನಾಡು- ನುಡಿ ಹಾಗೂ ಹೆಸರಾಂತ ಕವಿಗಳು ಮತ್ತು ಸಾಹಿತಿಗಳ ಸಾಧನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪ್ರೇಮಕುಮಾರ್ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಸಂಯೋಜಕ ಮಣಜೂರು ಮಂಜುನಾಥ್, ಕೂಡಿಗೆ ಸರ್ಕಾರಿ ಪಿಯೂ ಕಾಲೇಜು ಪ್ರಾಂಶುಪಾಲ ಡಾ ಬಸಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಪಿಡಿಓ ಎಂ.ಆರ್.ಸಂತೋಷ್, ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಮಾಜಿ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಉಪನ್ಯಾಸಕರಾದ ಸತೀಶ್, ರವೀಶ್, ಹನುಮರಾಜ್, ಶಿಕ್ಷಕ ನಾಗರಾಜ್, ಆಟೋರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳಾದ ರಕ್ಷಿನ್, ಕಾರ್ತಿಕ್, ವಿವಿಧ ಸಂಸ್ಥೆಗಳ ಪ್ರಮುಖರು , ರಿಕ್ಷಾ ಚಾಲಕರು ನಾಗರಿಕರು ಇದ್ದರು. ಈ ಸಂದರ್ಭದಲ್ಲಿ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪಿಯೂ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ನಂತರ ಶಾಲಾ ವಿದ್ಯಾರ್ಥಿಗಳ ಸಮ್ಮಖದಲ್ಲಿ ಪ್ರಮುಖ ರಸ್ತೆಯಲ್ಲಿ ರಥದೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ರಥವು ಕುಶಾಲನಗರ ಪಟ್ಟಣಕ್ಕೆ ತೆರಳಿತು.