ಮಡಿಕೇರಿ NEWS DESK ಸೆ.11 : ನಗರದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ತಿಳಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ ವತಿಯಿಂದ ಶನಿವಾರಸಂತೆಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕವಿದೆ. ಜೊತೆಗೆ ಕುಶಾಲನಗರದಲ್ಲಿ ನೂತನ ಬಸ್ ಘಟಕ ನಿರ್ಮಾಣವಾಗುತ್ತಿದೆ. ಈ ಎರಡು ಘಟಕಕ್ಕೆ ವಿಭಾಗೀಯ ಕಚೇರಿ ಆರಂಭಿಸಲು ಕಷ್ಟಸಾಧ್ಯ. ಆದ್ದರಿಂದ ಹತ್ತಿರದ ರಾಮನಾಥಪುರ ಇತರೆ ಒಟ್ಟು 4 ಘಟಕಗಳನ್ನು ಒಳಗೊಂಡು ಒಂದು ವಿಭಾಗೀಯ ಕಚೇರಿ ಆರಂಭಿಸಬೇಕು. ಆ ನಿಟ್ಟಿನಲ್ಲಿ ಆದ್ಯತೆ ಮೇಲೆ ಪ್ರಯತ್ನಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು. ಸರ್ಕಾರದ ಶಕ್ತಿ ಯೋಜನೆ ನಂತರ ಕರ್ನಾಟಕ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮತ್ತು ಸುಧಾರಣೆಯಾಗಿದೆ. ಪ್ರತಿನಿತ್ಯ ಸಾವಿರಾರು ಮಹಿಳೆಯರು ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು. ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿದೆ. ಆದ್ದರಿಂದ 4500 ಹೊಸ ಬಸ್‌ಗಳನ್ನು ಸಹ ಖರೀದಿಸಲಾಗಿದೆ. ಜೊತೆಗೆ ಚಾಲಕ, ನಿರ್ವಾಹಕ ಸೇರಿದಂತೆ 9 ಸಾವಿರ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್, 12 ರಂದು ಬೆಂಗಳೂರಿನಲ್ಲಿ ಹೊಸ ಬಸ್‌ಗಳ ಸಂಚಾರ ಸೇರಿದಂತೆ ಸಾರಿಗೆ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು. ಜಿಲ್ಲೆಯ ಕೊಡ್ಲಿಪೇಟೆಯಲ್ಲೂ ಸಹ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಹಾಗೆಯೇ ಖಾಸಗಿ ಬಸ್ ಮಾಲೀಕರ ಸಮಸ್ಯೆಯನ್ನು ಸಹ ಕೇಳಲಾಗಿದೆ. ಒಟ್ಟಾರೆ ಜಿಲ್ಲೆಯ ಜನರ ಸುಗಮ ಸಾರಿಗೆ ಸಂಚಾರಕ್ಕೆ ಎಲ್ಲಾ ರೀತಿಯ ಕ್ರಮವಹಿಸಲಾಗುವುದು ಎಂದು ಸಚಿವರು ನುಡಿದರು. ಜಿಲ್ಲೆಯಲ್ಲಿ ಹೊಸ ಬಸ್ ಮಾರ್ಗಕ್ಕೂ ಸಹ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವರು ನುಡಿದರು. ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಕೊಡಗು ಜಿಲ್ಲೆಯ ಶನಿವಾರಸಂತೆಯ ಭಾಗದಲ್ಲಿ ಹಲವು ದಶಕಗಳಿಂದ ಬಸ್ ನಿಲ್ದಾಣ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿತ್ತು. ಆ ನಿಟ್ಟಿನಲ್ಲಿ ಈಗ ಕಾಲ ಕೂಡಿಬಂದಿದ್ದು, ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ‘ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭವಾಗಬೇಕಿದೆ. ಆ ನಿಟ್ಟಿನಲ್ಲಿ ಮಾನ್ಯ ಸಚಿವರು ಪ್ರತ್ಯೇಕ ವಿಭಾಗೀಯ ಕಚೇರಿ ಆರಂಭಕ್ಕೆ ಅವಕಾಶ ಮಾಡಬೇಕು. ಪ್ರತ್ಯೇಕ ವಿಭಾಗೀಯ ಘಟಕ ಆರಂಭಿಸುವುದರ ಜೊತೆಗೆ ಬಸ್‌ಗಳಿಗೆ ಕೆಎ12 ನೋಂದಣಿ ಆಗಬೇಕು ಎಂದು ಶಾಸಕರು ಕೋರಿದರು.’ಈಗಾಗಲೇ ಜಿಲ್ಲೆಯಲ್ಲಿ ಎರಡು ಬಸ್ ಘಟಕಗಳು ಇರುವುದರಿಂದ ಹತ್ತಿರದ ರಾಮನಾಥ ಪುರ ಇತರೆ ಡಿಪೋ ಸೇರಿಕೊಂಡು ಮಡಿಕೇರಿಯಲ್ಲಿ ವಿಭಾಗೀಯ ಘಟಕ ಆರಂಭಿಸಬೇಕು. ಜೊತೆಗೆ ಹೊಸ ಮಾರ್ಗಗಳ ಬಸ್ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಕೋರಿದರು. ಮುಂದಿನ ದಿನಗಳಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೂ ದುಂಡಳ್ಳಿಯಲ್ಲಿ ಅವಕಾಶ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಶನಿವಾರಸಂತೆ ಭಾಗದ ಜನರ ಹಲವು ದಶಕಗಳ ಬೇಡಿಕೆಯನ್ನು ಮಾನ್ಯ ಸಚಿವರು ಈಡೇರಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣದ ಬಳಿ ಇರುವ ಜಾಗವನ್ನು ಗ್ರಾ.ಪಂ.ಗೆ ನೀಡುವಂತಾಗಬೇಕು. ಇದರಿಂದ ಮಳಿಗೆ ನಿರ್ಮಾಣ ಮಾಡಿ ಗ್ರಾ.ಪಂ. ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು. ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ಕುಶಾಲನಗರದಲ್ಲಿ ಕೆಎಸ್‌ಆರ್‌ಟಿಸಿ ಘಟಕ ನಿರ್ಮಾಣಕ್ಕೆ ಸಚಿವರು ಕಾರಣರಾಗಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಹಲವು ದೇವಾಲಯಗಳು ಇದ್ದು, ದೇವಾಲಯಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮುಜರಾಯಿ ಸಚಿವರು ಆದ ರಾಮಲಿಂಗರೆಡ್ಡಿ ಅವರಿಗೆ ಶಾಸಕರಾದ ಡಾ. ಮಂತರ್ ಗೌಡ ಅವರು ಮನವಿ ಮಾಡಿದರು. ಶಕ್ತಿ ಯೋಜನೆ ಆರಂಭದಿAದ ಕೊಡಗು ಜಿಲ್ಲೆಯಲ್ಲಿ ಇದುವರೆಗೆ 70 ಲಕ್ಷ ಮಹಿಳೆಯರು ಸಂಚರಿಸಿದ್ದು, 27 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಶಾಸಕರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಕೆಎಸ್‌ಆರ್‌ಟಿಸಿಯು ಇಡೀ ಏಷ್ಯದಲ್ಲಿಯೇ ಮಾದರಿ ಸಾರಿಗೆ ಸಂಸ್ಥೆಯಾಗಿದ್ದು, ಹಲವರಿಗೆ ಉದ್ಯೋಗ ನೀಡಿದೆ. ಜೊತೆಗೆ ಹೆಚ್ಚು ಲಾಭವನ್ನು ಸಹ ಹೊಂದಿದೆ ಎಂದು ತಿಳಿಸಿದರು.
ಹೆಚ್ಚಿನ ಜನಸಂಖ್ಯೆ ಹೊಂದಿರುವ ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಶ್ಲಾಘನೀಯವಾಗಿದೆ ಎಂದರು. ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಮಾತನಾಡಿ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿರುವುದು ಗಮನಾರ್ಹವಾಗಿದೆ. ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ ಉತ್ತಮವಾಗಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷರಾದ ಗೀತಾ ಹರೀಶ್ ಅವರು ಮಾತನಾಡಿ ಬಹು ದಶಕಗಳ ಬೇಡಿಕೆ ಈಗ ಈಡೇರಿದಂತಾಗಿದೆ ಎಂದು ಹೇಳಿದರು.
ಗ್ರಾ.ಪಂ. ಸದಸ್ಯರಾದ ರಘು ಅವರು ಮಾತನಾಡಿ ಬಸ್ ನಿಲ್ದಾಣಕ್ಕೆ ಸ್ಥಳ ದೊರೆಯಲು ಹಲವರು ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಹಿಂದಿನ ಜಿಲ್ಲಾಧಿಕಾರಿ ಅವರನ್ನು ಮರೆಯುವಂತಿಲ್ಲ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಚಂದ್ರಮೌಳಿ, ಶನಿವಾರಸಂತೆ ಹಾಗೂ ದುಂಡಳ್ಳಿ ಗ್ರಾ.ಪಂ.ಸದಸ್ಯರು, ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆಮಲಿಂಗಯ್ಯ ಬಿ.ಹೊಸ ಪೂಜಾರಿ, ಮಡಿಕೇರಿ ಕೆಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಾದ ಎಂ.ಎಂ.ಮೆಹಬೂಬ್ ಅಲಿ ಇತರರು ಇದ್ದರು.