ಮಡಿಕೇರಿ ಸೆ.12 NEWS DESK : ಕಾಫಿ ಫಸಲನ್ನು ಉತ್ತಮ ಧಾರಣೆಗೆ ಮಾರಾಟ ಮಾಡಬೇಕೆನ್ನುವ ಬೆಳೆಗಾರನ ನಿರೀಕ್ಷೆಗಳಿಗೆ “ಔಟ್ ಟರ್ನ್” ಹೆಸರಿನಲ್ಲಿ ವಂಚನೆಯಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಧಾರಣೆ ಲಭ್ಯವಿದ್ದರು ಖರೀದಿದಾರ ವರ್ತಕರಿಂದ ಬೆಳೆಗಾರರಿಗೆ ಯೋಗ್ಯ ಬೆಲೆ ದೊರೆಯುತ್ತಿಲ್ಲವೆಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಲಹೆಗಾರ ಸಿ.ಎನ್.ಬೋಸ್ ವಿಶ್ವನಾಥ್ ಅತಿವೃಷ್ಟಿಯಿಂದ ಫಸಲು ನೆಲಕಚ್ಚುತ್ತಿದೆ, ಕಾರ್ಮಿಕರ ಸಂಕಷ್ಟಗಳಿಗೆ ಪರಿಹಾರ ದೊರೆಯುತ್ತಿಲ್ಲ. ಬೆಳೆಗಾರರು ಬೆಳೆದ ಕಾಫಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ ಕಾಫಿ ಕೃಷಿ ಅವನತಿಯ ಹಾದಿಯನ್ನು ಹಿಡಿಯುವ ಆತಂಕವಿದೆ ಎಂದರು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔಟ್ ಟರ್ನ್ ಮೇಲೆ ಪಾರ್ಚ್‍ಮೆಂಟ್ ಕಾಫಿ ಕಿಲೋ ಒಂದಕ್ಕೆ 400 ರಿಂದ 450 ರೂ,.ಗಳಿದ್ದ ಸಂದರ್ಭ, ಸ್ಥಳೀಯ ಖರೀದಿದಾರ ವರ್ತಕರು ಉತ್ತಮ ಬೆಲೆಗೆ ಬೆಳೆಗಾರರಿಂದ ಕಾಫಿ ಖರೀದಿಗೆ ಮುಂದಾಗುತ್ತಿಲ್ಲ. ಬದಲಾಗಿ ಬೆಳೆಗಾರರಿಂದ ಕಾಫಿ ಲಭ್ಯವಾಗುತ್ತಿಲ್ಲವೆನ್ನುವ ಸಬೂಬು ನೀಡಿ, ಧಾರಣೆ 350 ರೂ.ಗಳಿಗೆ ಕುಸಿಯುವ ಹಂತದಲ್ಲಿ ಕಾಫಿ ಖರೀದಿ ಮಾಡುವ ಮೂಲಕ ಬೆಳೆಗಾರರಿಗೆ ಅಪಾರ ನಷ್ಟವನ್ನು ಉಂಟು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮುಕ್ತ ಮಾರುಕಟ್ಟೆಯಿಂದ ಬೆಳೆಗಾರನಿಗೆ ಅನುಕೂಲವಾಗಿರುವುದರ ಜೊತೆಯಲ್ಲೆ ಅಷ್ಟೇ ಪ್ರಮಾಣದಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದೆ. ಪ್ರಸ್ತುತ ಬೆಳೆದ ಕಾಫಿ ಫಸಲನ್ನು ಉತ್ತಮ ಧಾರಣೆಗೆ ಮಾರಾಟ ಮಾಡಬೇಕೆನ್ನುವ ಬೆಳೆಗಾರನ ನಿರೀಕ್ಷೆಗಳಿಗೆ “ಔಟ್ ಟರ್ನ್” ಹೆಸರಿನಲ್ಲಿ ವಂಚನೆಯಾಗುತ್ತಿದೆ ಎಂದು ಆರೋಪಿಸಿದರು. ಕಾಫಿ ಮಂಡಳಿ ಅಂತರರಾಷ್ಟ್ರೀಯ ಮಟ್ಟದ ದರಕ್ಕೆ ಅನುಗುಣವಾಗಿ ಬೆಳೆಗಾರರಿಗೆ ಉತ್ತಮ ಧಾರಣೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರಸಕ್ತ ಸಾಲಿನಲ್ಲಿ ಸುರಿದ ಅತಿಯಾದ ಮಳೆ ಕಾಫಿ ಫಸಲಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ. ಮಳೆಯಿಂದ ಕಾಫಿ ಕಾಯಿಗಳು ಕೊಳೆತು ಉದುರಿ ಬೆಳೆಗಾರನಿಗೆ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಈ ಹಂತದಲ್ಲಿ ಕಾಫಿ ಮಂಡಳಿ ಪ್ರತಿ ತೋಟಗಳಿಗೆ ತೆರಳಿ ಸಮೀಕ್ಷೆ ನಡೆಸದೆ ಇರುವುದರಿಂದ ಬೆಳೆಗಾರರಿಗೆ ಅತ್ಯಂತ ಕಡಿಮೆ ಪ್ರಮಾಣದ ಪರಿಹಾರವಷ್ಟೆ ದೊರಕುತ್ತಿದೆಯೆಂದು ಟೀಕಿಸಿದರು.
::: ಕಾರ್ಮಿಕರಿಗೆ ವಂಚನೆ :::
ಹಲವು ಸಮಸ್ಯೆಗಳ ನಡುವೆ ಬೆಳೆಗಾರ ತನ್ನ ಕಾಫಿ ತೋಟಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾನೆ. ಕಾಫಿ ಫಸಲನ್ನು ಕೊಯ್ಯುವ ಹಂತದಲ್ಲಿ ಪ್ರತಿ ಕೆ.ಜಿ. ಕಾಫಿ ಕೊಯ್ಲಿಗೆ 4 ರಿಂದ 5 ರೂ. ವ್ಯಯಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಕಾರ್ಮಿಕರ ಲಭ್ಯತೆಯೂ ಕ್ಷೀಣಿಸುತ್ತಿದೆ. ಇದನ್ನೆ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ವಾಹನಗಳಲ್ಲಿ ಕಾರ್ಮಿಕರನ್ನು ಒದಗಿಸಿ ಹೆಚ್ಚಿನ ಕೂಲಿ ಹಣವನ್ನು ಪಡೆಯುತ್ತಾರೆ. ಪಡೆದ ಕೂಲಿಯಲ್ಲಿ ಅರ್ಧ ಭಾಗದಷ್ಟು ಹಣವನ್ನು ತಾವೇ ಇಟ್ಟುಕೊಂಡು ಕಾರ್ಮಿಕರಿಗೆ ಕನಿಷ್ಟ ವೇತನ ನೀಡಿ ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ ವಾರದ ಸಂತೆಯ ದಿನಗಳಂದು ವಿವಿಧ ಇಲಾಖಾ ಅಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿ ಲಭ್ಯವಿಲ್ಲದೆ ಇರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಂತೆ ದಿನದಂದು ಗ್ರಾಮೀಣರು ತಮ್ಮ ಸಮೀಪದ ಜಿಲ್ಲಾ, ತಾಲ್ಲೂಕು, ಹೋಬಳಿ ಕೇಂದ್ರದ ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ ಅಧಿಕಾರಿಗಳು ಲಭ್ಯವಿಲ್ಲದೆ ಅಗತ್ಯ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್.ಎ.ರತ್ನ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಎ.ಎ.ಸತೀಶ್ ದೇವಯ್ಯ ಹಾಗೂ ಸಹ ಕಾರ್ಯದರ್ಶಿ ಕೆ.ಎಸ್.ರಾಜ ನರೇಂದ್ರ ಉಪಸ್ಥಿತರಿದ್ದರು.