ಮಡಿಕೇರಿ ಸೆ.21 NEWS DESK : ಚೆಟ್ಟಿಮಾನಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಸಂಪಾಜೆಗೆ ಒಳಪಟ್ಟ ಶಾಲಾ ಕಾಲೇಜುಗಳ ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೆಂಜರ್ಸ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಮತ್ತು ಜನಪದ ಗೀತೆ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಕುಂದಚೇರಿ ಗ್ರಾ.ಪಂ ಅಧ್ಯಕ್ಷರು ಹಾಗೂ ಮಾಜಿ ಸೈನಿಕ ಪೊಡನೊಳನ ದಿನೇಶ್ ಉದ್ಘಾಟಿಸಿ, ಪ್ರತಿಯೊಬ್ಬರು ಶಿಸ್ತು ಮತ್ತು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸುಂದರವಾಗಿರುತ್ತದೆ. ಇಂತಹ ಕಾರ್ಯಕ್ರಮ ಇದಕ್ಕೆ ಪೂರಕವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ಕೆ.ಎಸ್.ಅಣ್ಣಯ್ಯ ಮಾತನಾಡಿ, ನಮ್ಮ ದೇಶ ನಮ್ಮ ಹೆಮ್ಮೆ. ಸದಾ ನಾವು ದೇಶ ಪ್ರೇಮಿಗಳಾಗಿಯೇ ಬದುಕಿದಾಗ ಉತ್ತಮ ರಾಷ್ಟ್ರ ನಿರ್ಮಾಣ ಆಗುತ್ತದೆ. ಆಗ ಈ ರೀತಿಯ ಕಾರ್ಯಕ್ರಮಕ್ಕೆ ಅರ್ಥ ಬರಲು ಸಾಧ್ಯ ಎಂದು ಹೇಳಿದರು. ಸಭಾ ಅಧ್ಯಕ್ಷತೆಯನ್ನು ಸಂಪಾಜೆ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಧನಂಜಯ ಕಾರ್ಯಕ್ರಮದ ರೂಪುರೇಷೇಗಳನ್ನು ತಿಳಿಸಿದರು. ವೇದಿಕೆಯಲ್ಲಿ ಸಂಪಾಜೆ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಎ.ಎಸ್.ಶ್ರೀಧರ್, ಮುಖ್ಯ ಶಿಕ್ಷಕಿ ಬಿ.ಪಿ.ಗೀತಾಂಜಲಿ, ಜಿಲ್ಲಾ ಸಂಘಟಕಿ ದಮಯಂತಿ, ತೀರ್ಪುಗಾರರಾದ ನಾಟೋಳಂಡ ಸರೋಜ ವಿಜು, ಸಿ.ಆರ್.ಪಿ. ಪವಿತ್ರ ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು, ಚೆಟ್ಟಿಮಾನಿ ಶಾಲೆಯ ಶಿಕ್ಷಕಿಯರು, ಕಚೇರಿ ಸಹಾಯಕಿ ಗಾಯನ ಹಾಗೂ ಸುಮಾರು 110 ಮಂದಿ ವಿದ್ಯಾರ್ಥಿ ಸ್ಪರ್ಧಿಗಳು ಹಾಜರಿದ್ದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಉಷಾರಾಣಿ ಸ್ವಾಗತಿಸಿ ವಂದಿಸಿದರು. ಸಹಕಾರ್ಯದರ್ಶಿ ಬಿ.ಕೆ.ಲಲಿತ ಕಾರ್ಯಕ್ರಮ ನಿರೂಪಿಸಿದರು.