ನಾಪೋಕ್ಲು ಸೆ.23 NEWS DESK : ಮಡಿಕೇರಿ ತಾಲ್ಲೂಕು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೆಟ್ಟಗೇರಿ ವಲಯದ ಕಾರುಗುಂದ ಗ್ರಾಮದ ಗೌಡ ಸಮಾಜದಲ್ಲಿ 1855ನೇ ಮದ್ಯವರ್ಜನ ಶಿಬಿರ ನಡೆಯಿತು. 5ನೇ ದಿನದ ಗುಂಪು ಸಲಹೆ ಕಾರ್ಯಕ್ರಮದಲ್ಲಿ ಚಾಮರಾಜ ಜೋಡಿ ರಸ್ತೆ ಮೈಸೂರು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪಟ್ಟಡ ಶಿವಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಅದ್ಭುತ ಶಕ್ತಿಯಿದೆ. ಅದನ್ನು ಅರಿತು ಕಾರ್ಯೋನ್ಮುಖವಾದರೆ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ ಮದ್ಯ ವ್ಯಸನಿಗಳು ಮದ್ಯದಲ್ಲಿ ಶಕ್ತಿಯಿದೆ ಎಂಬ ಭ್ರಮೆಯಿಂದ ಜೀವನ ಹಾಳು ಮಾಡಿಕೊಳ್ಳುತ್ತಾರೆ ಎಂದು ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಭಿಪ್ರಾಯಪಟ್ಟರು. ಮದ್ಯ ಬಿಡುವವರು ಕುಂಟು ನೆಪಗಳನ್ನು ಹೇಳುತ್ತ ಮುಂದಕ್ಕೆ ಹಾಕುವ ಬದಲು ತಕ್ಷಣವೇ ಮದ್ಯ ತ್ಯಜಿಸಿ, ತಮ್ಮ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಬದುಕಿ ಎಂದು ಶಿಬಿರಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ತುಂಬಿದರುದರು. ಕಾರ್ಯಕ್ರಮದಲ್ಲಿ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಗೌರವ ಅಧ್ಯಕ್ಷ ಟಿ.ಎಂ.ಅಯ್ಯಪ್ಪ, ಕಾರ್ಯಾಧ್ಯಕ್ಷ ಬೆಳ್ಯನ ರವಿ, ಶಿಬಿರಾಧಿಕಾರಿ ಪಟ್ಟಡ ನಂದಕುಮಾರ್, ರಾಜರಾಜೇಶ್ವರಿ ವಿದ್ಯಾಲಯದ ಮುಖ್ಯೋಪಾಧ್ಯಾಯ ಕುದುಪಜೆ ಕವನ್ ಮತ್ತಿತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.