ವಿರಾಜಪೇಟೆ ಸೆ.25 NEWS DESK : ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್.ಸಲ್ದಾನ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸೇವಾ ಮನೋಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಅದರಲ್ಲೂ ಪ್ರಮುಖವಾಗಿ ಯುವಕರು ಪ್ರಕೃತಿಯನ್ನು ಆದಷ್ಟು ಮಾಲಿನ್ಯ ಮುಕ್ತ ಮಾಡುವುದರ ಕಡೆಗೆ ಗಮನಹರಿಸಬೇಕು. ನನ್ನ ಮನೆ, ನನ್ನ ಕಾಲೇಜು, ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಶುಚಿತ್ವವನ್ನು ಕಾಪಾಡುವುದಲ್ಲ. ನಾವು ಎಲ್ಲೇ ಇದ್ದರೂ ನಮ್ಮ ಸುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿರಬೇಕು ಎಂಬ ಮನೋಭಾವನೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಭಾವನೆ ಮೊದಲು ನಮ್ಮಲ್ಲಿ ಬಂದರೆ ನಮ್ಮನ್ನು ನೋಡಿ ಇತರರು ಬದಲಾಗುತ್ತಾರೆ ಎಂದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಪ್ರಿಯ ಮಾತನಾಡಿ ಸ್ವಚ್ಛತೆ ಎಂಬುದು ಮನದಿಂದ ಆರಂಭವಾಗಬೇಕು. ನಾವು ದೇಹ ಸ್ವಚ್ಛತೆಗೆ ಎಷ್ಟು ಪ್ರಾತಿನಿಧ್ಯವನ್ನು ನೀಡುತ್ತೇವೋ ಅದೇ ರೀತಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಯುವಜನತೆ ದೇಶದ ಶಕ್ತಿ ಎಂಬ ನಾನುಡಿಯಂತೆ ಯುವ ಜನತೆ ಬದಲಾದರೆ ದೇಶ ಬದಲಾಗುತ್ತದೆ. ಯುವಜನತೆ ಪರಿಸರವನ್ನು ಸ್ವಚ್ಛಗೊಳಿಸಿದರೆ ಅವರನ್ನು ನೋಡಿ ಇತರ ಜನರು ಕಲಿಯುತ್ತಾರೆ. ಆದಷ್ಟು ಪರಿಸರವನ್ನು ಹಾನಿಗೊಳಿಸುವಂತಹ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳ ಬಳಕೆಯನ್ನು ಕಡಿಮೆ ಮಾಡೋಣ. ಕಸವನ್ನು ಆದಷ್ಟು ಕಸದ ಬುಟ್ಟಿಗಳಿಗೆ ಸೇರಿಸುವಂತಹ ಕೆಲಸ ಮಾಡೋಣ ಮುಂದಿನ ಪೀಳಿಗೆ ಉತ್ತಮವಾದ ಪರಿಸರವನ್ನು ಕೊಡುಗೆ ನೀಡೋಣ ಎಂದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸ್ವಚ್ಛತೆ ಯೇ ಸೇವೆ ಎಂಬ ದೇಯವಾಕ್ಯದ ಅಡಿಯಲ್ಲಿ ವಿರಾಜಪೇಟ ಗೋಣಿಕೊಪ್ಪ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಎರಡು ಬದಿಯಲ್ಲಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿ , ಕಸವನ್ನು ಸಂಗ್ರಹಿಸಿ ಪರಿಸರ ಸ್ವಚ್ಛತೆಯನ್ನು ಮಾಡಿದರು. ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ಸಂಚಾಲಕ ನಾಗರಾಜು, ಎನ್.ಎಸ್.ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.