ಸೋಮವಾರಪೇಟೆ ಸೆ.24 NEWS DESK : ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ರಮ್ಯ ಸ್ಟುಡಿಯೋ ಮಾಲೀಕ ವಿನೋದ್ ಜಯರಾಂ ಅವರು ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ.
ದೇಶದ ವಿವಿಧ ಭಾಗಗಳಿಂದ 247 ಮಂದಿ ಛಾಯಾಚಿತ್ರಗಾರರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 3046 ಛಾಯಾಚಿತ್ರಗಳು ಸ್ಪರ್ಧೆಯಲ್ಲಿದ್ದವು. ಇದರಲ್ಲಿ ಮದುವೆ ಶಾಸ್ತ್ರ ವಿಭಾಗದ ಸ್ಪರ್ಧೆಯಲ್ಲಿ ವಿನೋದ್ ಜಯರಾಂ ಅವರು ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಕಾರ್ಯದರ್ಶಿಗಳು ಹಾಗೂ ವಿಭಾಗದ ಅಧ್ಯಕ್ಷರಾದ ಎ.ಎಂ. ಮುರುಳಿ, ಕಾರ್ಯದರ್ಶಿ ಬಿ.ಎನ್. ಉಮಾಶಂಕರ್, ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಅಧ್ಯಕ್ಷ ಸಿ.ಆರ್. ಸತ್ಯನಾರಾಯಣ, ಯೂತ್ ಫೋಟೋಗ್ರಫಿ ಸೊಸೈಟಿ ಅಧ್ಯಕ್ಷ ಮಂಜು ವಿಕಾಸ್ ಶಾಸ್ತ್ರೀ ಅವರುಗಳು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಸೋಮವಾರಪೇಟೆ ತಾಲೂಕು ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿನಯ್, ಜಿಲ್ಲಾ ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ವಸಂತ್, ವಂದನ ವೇಣು, ಪ್ರಿಯಾ, ಶನಿವಾರಸಂತೆಯ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.