ಸೋಮವಾರಪೇಟೆ ಸೆ.27 NEWS DESK : ಕೊಡವ ಸಮಾಜದ ಸುವರ್ಣ ಮಹೋತ್ಸವ ಸಮಾರಂಭವನ್ನು ಡಿ.24 ಹಾಗೂ 25ರಂದು ಸಮಾಜದ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದರು. ಸುವರ್ಣ ಮಹೋತ್ಸವ ಸಮಾರಂಭ ಆಚರಣೆ ಕುರಿತು ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 1974ರಲ್ಲಿ ಪ್ರಾರಂಭಗೊಂಡ ಸೋಮವಾರಪೇಟೆ ಕೊಡವ ಸಮಾಜ ಸುವರ್ಣ ಮಹೋತ್ಸವ ಆಚರಣೆಯ ಹೊಸ್ತಿಲಿನಲ್ಲಿ ಇದ್ದು ಜಿಲ್ಲೆಯ ಮತ್ತು ರಾಜ್ಯದ ಇತರೆಡೆಯ ಕೊಡವ ಸಮಾಜಗಳ ಸಂಪೂರ್ಣ ಸಹಕಾರ ಅತ್ಯಗತ್ಯ ಎಂದರು. ಸುವರ್ಣ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಂಸ್ಕøತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಫರ್ಧೆಗಳು ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಇದುವರೆಗೂ ಸಮಾಜ ಬೆಳೆದ ಬಂದ ರೀತಿ, ಸಾಧನೆ ಹಾಗೂ ಬರಹಗಾರರ ಕಥೆ, ಕವನ. ಲೇಖನಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ತಿಳಿಸಿದರು. ಇದೇ ಸಂದರ್ಭ ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಸಮಾಜದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಮಾಜದ ಉಪಾಧ್ಯಕ್ಷರಾದ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಅನಿಲ್, ಖಜಾಂಚಿ ಪಾಡೆಯಂಡ ಮುತ್ತಣ್ಣ ಸೇರಿದಂತೆ ಆಡಳಿತ ಮಂಡಳಿ ಎಲ್ಲಾ ಪದಾಧಿಕಾರಿಗಳು ಇದ್ದರು.