ಮಡಿಕೇರಿ ಅ.4 NEWS DESK : ಕೊಡಗು ಮಾನವ ಬಂಧುತ್ವ ವೇದಿಕೆ, ಕೊಡಗು ಜಿಲ್ಲಾ ಸಂಚಾಲನಾ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ “ಮಾನವೀಯತೆಯೇ ಧರ್ಮ – ಸಂವಿಧಾನವೇ ಧರ್ಮ ಗ್ರಂಥ” ಎಂಬ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ನಗರದ ಪತ್ರಿಕಾ ಭವನದಲ್ಲಿ ಭಾರತೀಯ ದಂಡ ಸಂಹಿತೆ ಸಂವಾದ ಮತ್ತು ಅವಲೋಕನ ಕಾರ್ಯಕ್ರಮವನ್ನು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇಶದ ಕಾನೂನಿನಲ್ಲಿ ಬದಲಾವಣೆಗಳಾಗಿವೆ. ಕಳೆದ 75ವರ್ಷಗಳಲ್ಲಿ ಸಂವಿಧಾನಕ್ಕೆ 105 ಬಾರಿ ತಿದ್ದುಪಡಿ ತರಲಾಗಿದೆ. ಕಾಲಕಾಲಕ್ಕೆ ಬದಲಾಗುತ್ತಿರುವ ಸಮಾಜದೊಂದಿಗೆ ಸಂವಿಧಾನವೂ ಬದಲಾಗಿ ಇಂದಿನ ಸಮಾಜಕ್ಕೆ ಪ್ರಸ್ತುತವಾದ ಸಂವಿಧಾನ ಇರಿಸಿಕೊಳ್ಳುವಂತಾಗಿದೆ. ಸಂವಿಧಾನದ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಒಟ್ಟು ಪ್ರಕ್ರಿಯೆಯನ್ನು ಕಾನೂನು ಪರಿಷ್ಕರಣೆ ಎನ್ನಲಾಗುತ್ತದೆ. ಯಾವುದೇ ಕಾನೂನು ತಿದ್ದುಪಡಿಯಾದರು ಅದು ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿರಬಾರದು ಎಂದರು. ವಕೀಲ ಹಾಗೂ ವೇದಿಕೆಯ ಸಂಚಾಲಕ ಕೆ.ಆರ್.ವಿದ್ಯಾಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಶಕ್ತಿ ವಾರಪತ್ರಿಕೆಯ ಸಂಪಾದಕ ಡಾ.ಎಸ್.ವೈ.ಗುರುಶಾಂತ್, ಪ್ರಮುಖರಾದ ಚಂದ್ರಮೌಳಿ, ಪತ್ರಕರ್ತ ಕೆ.ಎಸ್.ಸತೀಶ್ ಕುಮಾರ್, ವೇದಿಕೆಯ ಗೌರವ ಸಂಚಾಲಕ ಬಿ.ಎಸ್.ರಮಾನಾಥ್, ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ, ತಾಲ್ಲೂಕು ಅಧ್ಯಕ್ಷ ಎಂ.ಎಸ್.ವೀರೇಂದ್ರ, ಚಿಂತಕ ಜೆ.ಆರ್.ಪಾಲಾಕ್ಷ, ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಹೆಚ್.ಎಂ.ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ಕೊಡಗು ಮಾನವ ಬಂಧುತ್ವ ವೇದಿಕೆ, ಕೊಡಗು ಜಿಲ್ಲಾ ಸಂಚಾಲನಾ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಅರಿವು ಎಂಬ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ವೆಂಕಟೇಶ್ ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರಶ್ನೆಗಳಿಗೆ ಉತ್ತರಿಸಿದರು.