ಮಡಿಕೇರಿ ಅ.4 NEWS DESK : ಸಿಬಿಎಸ್‍ಇ ದಕ್ಷಿಣ ವಲಯದ ಹಾಕಿ ಪಂದ್ಯಾವಳಿಗೆ ನಗರದ ಕೊಡಗು ವಿದ್ಯಾಲಯದ ಮೈದಾನದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ಸಿಬಿಎಸ್‍ಇ 22 ಶಿಕ್ಷಣ ಸಂಸ್ಥೆಗಳ 36 ತಂಡದ 700 ಆಟಗಾರರು ಪಾಲ್ಗೊಂಡಿದ್ದಾರೆ. ಆಟಗಾರರನ್ನು ಆರತಿಯೊಂದಿಗೆ, ಹಣೆಗೆ ತಿಲಕವನ್ನಿಟ್ಟು, ಸಾಂಪ್ರದಾಯಿಕ ಕೊಡವ ವಾಲಗದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಮಟ್ಟದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ್ತಿ ಹಾಗೂ ಎಫ್‍ಎಂಕೆಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಪುಷ್ಪ ಕುಟ್ಟಣ್ಣ, ಸಿಬಿಎಸ್‍ಇ ಪರಿವೀಕ್ಷಕ ಅಫ್ಸರ್ ಅಹಮದ್ ಮತ್ತು ಶಾಲಾ ಕ್ರೀಡಾಧ್ಯಕ್ಷರಾದ ರಘು ಮಾದಪ್ಪ ಅವರನ್ನು ಒಳಗೊಂಡಂತೆ ಶಾಲಾ ಮುಖ್ಯಸ್ಥರು ಸಿಬಿಎಸ್‍ಇ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.
ಕ್ರೀಡಾ ಜ್ಯೋತಿ ಜ್ವಲನ : ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾವಳಿಯಲ್ಲಿ ಪಾಲ್ಗೊಂಡ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪರ್ಲಿನ್ ಪೊನ್ನಮ್ಮ ಅವರು ಮೈದಾನಕ್ಕೆ ತಂದ ಕ್ರೀಡಾ ಜ್ಯೋತಿಯನ್ನು ಮುಖ್ಯ ಅತಿಥಿ ಡಾ. ಪುಷ್ಪಾ ಕುಟ್ಟಣ್ಣ ಅವರು ಸ್ವೀಕರಿಸಿ, ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಇದೇ ಸಂದರ್ಭ ಆಟಗಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭ ಕ್ರೀಡಾಪಟುಗಳನ್ನು ಉದ್ದೇಶಿಸಿ ಡಾ.ಪುಷ್ಪ ಕುಟ್ಟಣ್ಣ ಮಾತನಾಡಿ, ಕ್ರೀಡಾಪಟುಗಳು ಶ್ರದ್ಧೆ ಮತ್ತು ಛಲವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿ, ಕೊಡಗು ವಿದ್ಯಾಲಯ ಶಾಲೆಯು ಇಂತಹ ಒಂದು ಬೃಹತ್ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿರುವುದು ಕೊಡಗಿಗೆ ಹೆಮ್ಮೆಯ ವಿಷಯವೆಂದರು. ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್. ಸ್ವಾಗತಿಸಿದರು.
ಪ್ರದರ್ಶನ ಪಂದ್ಯ :: ಉದ್ಘಾಟನಾ ಸಮಾರಂಭದ ಹಿನ್ನೆಲೆ ಭಾರತ ಕ್ರೀಡಾ ಪ್ರಾಧಿಕಾರ (ಸಾಯಿ) ಮಡಿಕೇರಿ ಮತ್ತು ಕೊಡಗು ವಿದ್ಯಾಲಯದ ಹಳೇ ವಿದ್ಯಾರ್ಥಿಗಳ ತಂಡಗಳ ನಡುವಿನ ಪ್ರದರ್ಶನ ಪಂದ್ಯ ಗಮನ ಸೆಳೆಯಿತು.