ಮಡಿಕೇರಿ ಅ.4 NEWS DESK : ಕೊಡಗಿನ ಸುಂದರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಯತ್ನದೊಂದಿಗೆ ದಸರಾ ಸಮಿತಿಗಳು ಅಧಿಕ ಶಬ್ಧದಿಂದ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಡಿಜೆ ಅಬ್ಬರಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಮತ್ತು ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ “ಸಂವಾದ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಬ್ಬರದ ಡಿಜೆ ಸಂಗೀತ ಯಾವುದೇ ಭಾಗಕ್ಕೆ ತೆರಳಿದರು ನಿಮಗೆ ಕಾಣಸಿಗುತ್ತದೆ. ಆದರೆ ಹಿರಿಯರಿಂದ ಬಳುವಳಿಯಾಗಿ ಬಂದ ಕೊಡಗಿನ ಸಂಸ್ಕೃತಿಯನ್ನು ನಾವು ಇಲ್ಲೆ ಕಾಣಲು ಸಾಧ್ಯವೆನ್ನುವುದನ್ನು ಅರ್ಥೈಸಿಕೊಂಡು, ಡಿಜೆ ಬದಲಾಗಿ ಇಲ್ಲಿನ ಸಂಸ್ಕೃತಿ ಮತ್ತು ವಾಲಗಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು. ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕಾರವಾಗಿ ಬಂದ ಶಬ್ಧ ಮಾಲಿನ್ಯ ನಿಯಂತ್ರಣ ಕಾನೂನು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿದ ಕಾನೂನೇ ಆಗಿದೆ. ಕಾನೂನು ಎನ್ನುವುದು “ಶಿಕ್ಷೆ” ನೀಡುವುದಕ್ಕೆ ಇರುವುದಲ್ಲ, ಬದಲಾಗಿ ತಪ್ಪುಗಳು ನಡೆಯದಂತೆ ನೋಡಿಕೊಳ್ಳುವುದಕ್ಕಾಗಿ ಇದೆ. ಕಾನೂನನ್ನು ಗೌರವಿಸುವ ಮೂಲಕ ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ಗೌರವದಿಂದ ಕಾಣಬೇಕು. ಇತರರಿಗೆ ತೊಂದರೆ ನೀಡುವ ಸ್ವಾತಂತ್ರ್ಯ ನಮ್ಮದಾಗಬಾರದು. ದಸರಾ ಉತ್ಸವದ ಸಂದರ್ಭ ಮಹಿಳೆಯರು, ಮಕ್ಕಳು, ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಸಂಕಷ್ಟ ತರಬಲ್ಲ ಡಿಜೆ ಸಂಗೀತವನ್ನು ಕೈಬಿಡಬೇಕು. ಡಿಜೆ ಗಾಗಿ ಲಕ್ಷಾಂತರ ರೂ. ಖರ್ಚು ಮಾಡುವ ಬದಲು ಕೊಡವ ವಾಲಗದ ಕಲಾವಿದರಿಗೆ ಹೆಚ್ಚಿನ ಸಂಭಾವನೆ ನೀಡಿ ಇಲ್ಲಿನ ಸಂಸ್ಕೃತಿಯ ಭಾಗವಾಗಿರುವ ವಾಲಗವನ್ನು ಬಳಸಿಕೊಳ್ಳಬೇಕು, ನಮಗಾಗಿ ನಾವೇ ಬದಲಾಗಬೇಕು ಎಂದು ಎಸ್‍ಪಿ ಸಲಹೆ ನೀಡಿದರು. ಈ ಬಾರಿಯ ದಸರಾ ಉತ್ಸವದಲ್ಲಿ ಬಳಸುವ ಡಿಜೆಗಳ ಶಬ್ಧ 75 ಡೆಸಿಬಲ್ ಮಿತಿಯಲ್ಲೆ ಇರಬೇಕು. ಈ ಬಾರಿ ಮಂಟಪ ಸಮಿತಿಗಳು ಡಿಜೆ ಬಳಕೆಗೆ ಸ್ವಯಂ ಮಿತಿ ಅಳವಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಪ್ರಸ್ತುತ ಮೈಸೂರು ದಸರಾ ಉತ್ಸವ ವಿಶ್ವ ಖ್ಯಾತಿಯನ್ನು ಪಡೆದಿದ್ದು, ಅಲ್ಲಿನ ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದ ಜನರು ಹರಿದು ಬರುತ್ತಾರೆ. ಇದಕ್ಕೆ ಕಾರಣ, ಮೈಸೂರು ದಸರಾದಲ್ಲಿ ಮಾತ್ರ ಕಾಣ ಬಹುದಾದ ವಿಶಿಷ್ಟ ಸಂಸ್ಕೃತಿಯೇ ಆಗಿದೆ. ಅದೇ ರೀತಿಯಲ್ಲಿ ಮಡಿಕೇರಿ ದಸರಾ ಉತ್ಸವದಲ್ಲಿ ನಮ್ಮ ಈ ನೆಲದ ಸಂಸ್ಕೃತಿಗೆ ಹೆಚ್ಚಿನ ಒತ್ತು ನಿಡುವುದು ಅತ್ಯವಶ್ಯವೆಂದು ಹೇಳಿದರು.
::: ತುತ್ತೂರಿ, ಮುಖವಾಡ ನಿಷೇಧ :::
ಶಬ್ಧ ಮಾಲಿನ್ಯಕ್ಕೆ ಕಾರಣವಾಗಬಹುದಾದ ತುತ್ತೂರಿ(ವೂ ವೂ ಜೆಲ್ಲಾ) ಬಳಕೆ ಮತ್ತು ದಸರಾ ಉತ್ಸವದ ಸಂದರ್ಭ ದುಷ್ಕøತ್ಯಗಳನ್ನು ನಡೆಸಲು ಅವಕಾಶ ಕಲ್ಪಿಸುವ ಮುಖವಾಡಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದೊಮ್ಮೆ ಅಂಗಡಿ ಮಳಿಗೆಗಳಲ್ಲಿ ಇವುಗಳ ಮಾರಾಟ ಕಂಡು ಬಂದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಎಸ್‍ಪಿ ತಿಳಿಸಿದರು.
::: ಜಂಬೋ ತಂಡ :::
ಮಡಿಕೇರಿ ದಸರಾ ಉತ್ಸವದ ಸಂದರ್ಭ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲು ಸಾವಿರ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗುತ್ತದೆ. 10 ರಿಂದ 15 ಪೊಲೀಸ್‍ರನ್ನು ಒಳಗೊಂಡ 6 ರಿಂದ 7 ಮಂದಿಯ “ಜಂಬೋ ತಂಡ”ವನ್ನು ರಚಿಸಲಾಗುತ್ತದೆ. ಈ ತಂಡಗಳು ಉತ್ಸವದ ಸಂದರ್ಭ ಜನಸಾಂದ್ರತೆ ಅಧಿಕವಿರುವೆಡೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಪಿಕ್ ಪಾಕೆಟ್ ಮೊದಲಾದ ದುಷ್ಕøತ್ಯಗಳನ್ನು ತಡೆಗಟ್ಟಲಿವೆ. ಇದರೊಂದಿಗೆ ಇಬ್ಬರು ಪೊಲೀಸರ “ಚಿತಾ ತಂಡ”ಗಳು ನಗರದ ಅಂಚಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದರು. ಪ್ರತಿ ಮಂಟಪಕ್ಕೆ ಒಬ್ಬ ಪೊಲೀಸ್ ಅಧಿಕಾರಿ ಹಾಗೂ 8 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ದಸರಾ ಉತ್ಸವದ ಸಂದರ್ಭ ವಾಹನ ಸಂಚಾರ ಮತ್ತು ನಿಲುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಪತ್ರಕರ್ತರಾದ ಆನಂದ್ ಕೊಡಗು ಕಾರ್ಯಕ್ರಮ ನಿರೂಪಿಸಿ, ನವೀನ್ ಡಿಸೋಜ ಸ್ವಾಗತಿಸಿ, ಶಿವರಾಜ್ ವಂದಿಸಿದರು.
::: ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕ್ರಮ :::
ಜಿಲ್ಲೆಯ ಕಾಫಿ ಪ್ಲಾಂಟೇಷನ್Uಳಿಗೆ ಹೊರ ರಾಜ್ಯಗಳ ವಿವಿಧೆಡೆಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಹೀಗೆ ಬರುವವರಲ್ಲಿ ಸಮಾಜ ಘಾತುಕ ಶಕ್ತಿಗಳು ಉದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‍ಪಿ ಕೆ. ರಾಮರಾಜನ್ ತಿಳಿಸಿದರು. ದೇಶದ ಪ್ರಜೆಗೆ ರಾಷ್ಟ್ರದ ಯಾವುದೇ ಮೂಲೆಗಳಿಗೆ ತೆರಳುವ ಮತ್ತು ಕಾರ್ಯನಿರ್ವಹಿಸುವ ಸ್ವಾತಂತ್ರ್ಯವಿದೆ. ಕಾಫಿ ಪ್ಲಾಂಟೇಷನ್‍ಗಳನ್ನು ನಿರ್ವಹಣೆ ಮಾಡಲು ಕಾರ್ಮಿಕರ ಅಗತ್ಯವಿದ್ದು, ಅದಕ್ಕೆ ಪೂರಕವಾಗಿ ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರು ಬರುತ್ತಿದ್ದಾರೆ. ಇವರಿಂದ ಅಪರಾಧ ಪ್ರಕರಣ ಹೆಚ್ಚಾಗುತ್ತಿದೆ ಎನ್ನುವುದು ತಪ್ಪು ಅಭಿಪ್ರಾಯವಾಗಿದೆ. ಕಾರ್ಮಿಕರಾಗಿ ಬಂದವರ ಬಗ್ಗೆ ಯಾವುದೇ ಸಂಶಯಗಳಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ, ಪರಿಶೀಲನೆ ನಡೆಸಲಾಗುತ್ತದೆ. ಕಾರ್ಮಿಕರು ಬಾಂಗ್ಲಾ ದೇಶದವರೆದು ಕಂಡು ಬಂದಲ್ಲಿ, ಅಂತಹವರನ್ನು ಮರಳಿ ಅವರ ದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‍ಪಿ ಸ್ಪಷ್ಟಪಡಿಸಿದರು.