ವಿರಾಜಪೇಟೆ ಅ.5 NEWS DESK : ವಿದ್ಯಾರ್ಥಿ ಜೀವನವು ಅಮೂಲ್ಯವಾಗಿದ್ದು, ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಆರಂಭವು ಶಾಲಾ ಕಾಲೇಜುಗಳಿಂದಲೇ ಆರಂಭವಾಗುತ್ತದೆ. ಅಂದರೆ ಇಂದಿಗೂ ಕಾಲೇಜಿನಲ್ಲಿ ಚುನಾವಣೆಯ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು. ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿರುವ ಸ್ನೇಹ, ಭಾಂದವ್ಯ, ವಾತ್ಸಲ್ಯ ಮತ್ತೆ ಸಿಗುವುದಿಲ್ಲ ಎಂದರು. ಎಲ್ಲರನ್ನೂ ಸಮಾನತೆಯಿಂದ ಕಾಣುವ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಸುರೇಶ್ ಅಲೆಟ್ಟಿ ಮಾತನಾಡಿ, ವಿದ್ಯಾರ್ಥಿ ಎಂದರೇ ಗುರಿಯನ್ನು ನಿಭಾಯಿಸುವ ವ್ಯವಸ್ಥೆ. ಇಲ್ಲಿ ಕ್ರಿಯಾಶೀಲ ವ್ಯಕ್ತಿತ್ವವನ್ನು ವ್ಯಕ್ತಪಡಿಸುವ ವೇದಿಕೆಯೇ ಕಾಲೇಜು. ಇದಕ್ಕೆ ವೇದಿಕೆ ಒದಗಿಸುವುದು ವಿದ್ಯಾರ್ಥಿ ಸಂಘ. ವಿದ್ಯಾರ್ಥಿಗಳು ಕ್ರೀಡೆ, ಎನ್ ಎಸ್ ಎಸ್, ಎನ್ ಸಿ ಸಿ ಸೇರಿದಂತೆ ಎಲ್ಲದರಲ್ಲಿಯೂ ಕ್ರಿಯಾಶೀಲರಾಗಿರಿ ಜೊತೆಗೆ ಪರಿಸರ ಕಾಳಜಿ, ಸ್ವಚ್ಛತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದರು. ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ. ಇಟ್ಟಿರ ಬಿದ್ದಪ್ಪ ಮಾತನಾಡಿ, ಪ್ರಜಾಪ್ರಭುತ್ವದ ತಳಹದಿಯಲ್ಲಿ ಕ್ರಿಯಾಶೀಲರಾಗಿ, ತತ್ವ ಶೀಲರಾಗಿ ಉತ್ತಮ ಸಮಾಜವನ್ನು ನಿರ್ಮಿಸಲು ವಿದ್ಯಾರ್ಥಿ ಸಂಘವು ವೇದಿಕೆಯಾಗಿದೆ. ಕವಿ ಸಿದ್ದಯ್ಯ ಪುರಾಣಿಕರ ನುಡಿಯಂತೆ ಮೊದಲು ಮಾನವರಾಗಿ, ಯಾವುದೇ ಉನ್ನತ ಹುದ್ದೆಯಲ್ಲಿದ್ದರು ಮೊದಲು ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಎಂದರು. ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸುವುದರ ಮೂಲಕ ಜವಾಬ್ದಾರಿಯಿಂದ ಮುನ್ನಡೆದು ಶ್ರಮ ವಹಿಸಿ ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಸಿ.ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಹಾಗೂ ರೋವರ್ಸ್ ಅಧಿಕಾರಿ ವೇಣುಗೋಪಾಲ್, ವಿದ್ಯಾರ್ಥಿ ಕ್ಷೇಮಪಾಲನ ಸಂಚಾಲಕ ಆರ್ ರಘುರಾಜ್, ಕ್ರೀಡಾ ಸಮಿತಿ ಸಂಚಾಲಕ ಎನ್.ಗುರುಪ್ರಸಾದ್, ಐಕ್ಯೂಎಸಿ ಸಂಚಾಲಕ ಡಾ. ಕೆ.ಬಸವರಾಜು ಮತ್ತು ವಿದ್ಯಾರ್ಥಿ ಪದಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು. ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ.ಬಿದ್ದಪ್ಪ, ಕುಲಸಚಿವ ಸುರೇಶ್ ಅಲೆಟ್ಟಿ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.