ಮಡಿಕೇರಿ NEWS DESK ಅ.6 : ವಿಶ್ವದಲ್ಲಿಯೇ ವಿಶಿಷ್ಟವಾಗಿರುವ ಕೊಡವರ ಆಚಾರ ವಿಚಾರ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ತಿಳಿಸಿದ್ದಾರೆ. ಕೂಡಿಗೆಯ ಕೊಡವ ಕೂಟದ ವತಿಯಿಂದ ಸ್ಥಳೀಯ ರೈತ ಸಹಕಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೈಲ್ದ್ ಪೊಳ್ದ್ ಸಂತೋಷ ಕೂಟ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವ ಕೂಟಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು.
ಕೊಡಗ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುಂಡ ಮಾತನಾಡಿ, ಕೊಡವರ ಜಮ್ಮಾ ಆಸ್ತಿಯನ್ನು ಪರಾಭಾರೆ ಮಾಡದೆ ಜೋಪಾನವಾಗಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವ ಸಮುದಾಯ ಕೊಡವ ಪರಂಪರೆ ಹಾಗೂ ಸಂಸ್ಕೃತಿಯ ವಾರಸುದಾರರಾಗಬೇಕು. ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡವ ಕೂಟದ ಕಾರ್ಯದರ್ಶಿ ಮುಂಡಂಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರಾದ ಕೊಳುವಂಡ ಮಂದಪ್ಪ, ಪಟ್ಟಡ ಚಿಟ್ಟಿಯಪ್ಪ, ಮುಕ್ಕಾಟಿರ ಅಪ್ಪಣ್ಣ, ಐಮುಡಿಯಂಡ ರಮೇಶ್, ಪಟ್ಟಡ ಬೀನಾ, ಪಾಲೆಂಗಡ ಸುಜಾತ ಇದ್ದರು. ಐಮುಡಿಯಂಡ ಸವಿತಾ ಸ್ವಾಗತಿಸಿ, ಕೋಡಿಮಣಿಯಂಡ ಸವಿತಾ ನಿರೂಪಿಸಿ, ಪಾಲೆಂಗಡ ಸುಜಾತ ಪ್ರಾರ್ಥಿಸಿ, ಕೊಳುವಂಡ ಮಂದಪ್ಪ ವಂದಿಸಿದರು.