ಮಡಿಕೇರಿ ಅ.14 NEWS DESK : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಸಂಭ್ರಮದಿಂದ ಸಮಾರೋಪಗೊಂಡಿದ್ದು, ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ವಿಶೇಷ ವೇತನ ಪಾವತಿಸಬೇಕೆಂದು ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಯೂನಿಯನ್ ನ ಅಧ್ಯಕ್ಷ ಷರೀಫಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ಅವರು, ಕಾಯಕವೇ ಕೈಲಾಸ ಎಂಬಂತೆ ರಾತ್ರಿ ಹಗಲೆನ್ನದೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ನವರಾತ್ರಿಯ ಅಂಗವಾಗಿ ವಿಶೇಷ ವೇತನ ಪಾವತಿ ಮಾಡುವ ಮೂಲಕ ನಗರಸಭೆ ದುಡಿಮೆಗೆ ತಕ್ಕ ಫಲ ನೀಡಬೇಕೆಂದು ಒತ್ತಾಯಿಸಿದ್ದಾರೆ. ನಗರದ ತುಂಬಾ ರಾಶಿ ರಾಶಿ ಕಸ ಬಿದ್ದಿದೆ, ಮಳೆಯಿಂದಾಗಿ ತ್ಯಾಜ್ಯ ಕೆಸರುಮಯವಾಗಿದೆ, ಚರಂಡಿಗಳು ತುಂಬಿ ಹೋಗಿವೆ. ಕಸ ವಿಲೇವಾರಿ ಮಾಡಿ ಸ್ವಚ್ಛತೆಯನ್ನು ಕಾಪಾಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪರಿಗಣಿಸಿ ಗೌರವಿಸಬೇಕು ಮತ್ತು ಹೆಚ್ಚು ವೇತನವನ್ನು ನೀಡಬೇಕು. ಈ ಬಗ್ಗೆ ನಗರಸಭೆಯ ಆಡಳಿತಾಧಿಕಾರಿ ಹಾಗೂ ದಸರಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.