ಮಡಿಕೇರಿ ಅ.14 NEWS DESK : ನೆಲ್ಯಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವಸ್ಥಾನಕ್ಕೆ ಒಳಪಟ್ಟ ಜಾಗದಲ್ಲೆ ‘ಹಿಂದೂ ರುದ್ರಭೂಮಿ’ ನಿರ್ಮಾಣಕ್ಕೆ ನಡೆಯುತ್ತಿರುವ ಪ್ರಯತ್ನಗಳನ್ನು ವಿರೋಧಿಸಿ ಅ.15 ರಂದು ಮೌನ ಪಾದಯಾತ್ರೆ ಮತ್ತು ಗ್ರಾಮ ಪಂಚಾಯ್ತಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಸತ್ಯನಾರಾಯಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಟಿ.ಜಿ, ಅತ್ಯಂತ ಪುರಾತನವಾದ ಶ್ರೀಸತ್ಯನಾರಾಯಣ ದೇಗುಲದ ಸ್ವಾಧೀನದಲ್ಲಿರುವ ಜಾಗದಲ್ಲೆ ‘ಮಸಣಿಕಮ್ಮ’ನ ಸ್ಥಾನವಿದ್ದು, ಶತಮಾನಗಳಿಂದ ಈ ಸ್ಥಾನದಲ್ಲಿ ಆರಾಧನೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರ ಸಮೀಪವೇ ರುದ್ರಭೂಮಿ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿದರು. ದೇವರ ಉತ್ಸವದ ಸಂದರ್ಭ ದೇವರ ಭಂಡಾರ ತರುವ, ದೇವರು ಜಳಕಕ್ಕೆ ತೆರಳುವ ಹಾದಿಯ ಬಳಿಯಲ್ಲೆ ರುದ್ರ ಭೂಮಿ ನಿರ್ಮಿಸಬೇಕೆಂದು ಎಡಪಕ್ಷವೊಂದು ಪ್ರತಿಭಟನೆ ನಡೆಸಿರುವುದಲ್ಲದೆ, ಪಂಚಾಯ್ತಿಗೆ, ಜಿಲ್ಲಾಡಳಿತಕ್ಕೆ ಮನವಿಗಳನ್ನು ನೀಡಿದೆ. ರುದ್ರಭೂಮಿಯನ್ನು ದೇವಸ್ಥಾನದ ಬಳಿಯಲ್ಲಿ ನಿರ್ಮಿಸುವ ಪ್ರಯತ್ನಗಳು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಯಾವುದೇ ಕಾರಣಕ್ಕೂ ದೇವಸ್ಥಾನದ ಬಳಿಯಲ್ಲಿ ರುದ್ರಭೂಮಿಯನ್ನು ನಿರ್ಮಿಸಬಾರದು ಎಂದು ಒತ್ತಾಯಿಸಿದರು. ಗ್ರಾಮ ವ್ಯಾಪ್ತಿಯ ಹೊರ ಅಂಚಿನಲ್ಲಿ ರುದ್ರಭೂಮಿಯನ್ನು ನಿರ್ಮಿಸಿದರೆ ನಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದ ಚಂದ್ರಶೇಖರ್, ಅ.15 ರಂದು ಬೆಳಗ್ಗೆ 9.30 ಗಂಟೆಗೆ ದೇವಸ್ಥಾನದಲ್ಲಿ ಸಂಕಲ್ಪ ಪೂಜೆಯನ್ನು ಮಾಡಿದ ಬಳಿಕ ಗ್ರಾಮಸ್ಥರೊಂದಿಗೆ ಗ್ರಾಮ ಪಂಚಾಯ್ತಿ ಕಚೇರಿಯವರೆಗೆ ಮೌನ ಪಾದಯಾತ್ರ ನಡೆಸಲಾಗುವುದು. ಗ್ರಾಮ ಪಂಚಾಯ್ತಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
::: ಜಲ ಜೀವನ್ ತೊಡಕು ::: ವರ್ಷಂಪ್ರತಿ ಉತ್ಸವದ ಸಂದರ್ಭ ದೇವರು ಜಳಕ ಮಾಡುವ ನದಿ ಪಾತ್ರದ ಜಾಗವನ್ನು ಈ ಹಿಂದೆ ಜಲ ಜೀವನ್ ಮಿಷನ್ ಯೋಜನೆಯಡಿ, ನೀರು ಸರಬರಾಜಿಗೆ ಗುರುತಿಸಲಾಗಿತ್ತು. ಆ ಸಂದರ್ಭ ಸಂಬಂಧಪಟ್ಟವರ ಮನವೊಲಿಸುವ ಮೂಲಕ, ದೇವರ ಜಳಕ ನಡೆಸುವ ಸ್ಥಳವನ್ನು ಸ್ವಲ್ಪ ಬದಲಿಸಲಾಯಿತು. ಹೀಗಿದ್ದೂ ಪ್ರಸ್ತುತ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯಿಂದಾಗಿ, ದೇವರ ಜಳಕ ನಡೆಯುವ ಪ್ರದೇಶದಲ್ಲಿ ಮಣ್ಣು ಕುಸಿದು ಜಾಗ ಇಕ್ಕಟ್ಟಾಗಿ ಪರಿಣಮಿಸಿದೆ ಎಂದು ಚಂದ್ರಶೇಖರ್ ಗಮನ ಸೆಳೆದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ವಿನೋದ್ ಟಿ.ಜಿ., ಖಜಾಂಚಿ ಸುಪ್ರೀತ್ ಕೆ.ಜೆ., ಜಂಟಿ ಕಾರ್ಯದರ್ಶಿ ಸತ್ಯಜಿತ್ ಟಿ.ಇ., ಮುಖ್ಯಸ್ಥರಾದ ಟಿ.ಬಿ.ಗಣೇಶ್ ಹಾಗೂ ನಿರ್ದೇಶಕ ಮಾನಸ್ ಕೆ.ಸಿ ಉಪಸ್ಥಿತರಿದ್ದರು.