ಕುಶಾಲನಗರ ಅ.19 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ-50 ಹಾಗೂ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.11 ರಂದು ಏಕಕಾಲದಲ್ಲಿ ಐದು ಸಹಸ್ರ ಮಂದಿಯಿಂದ ಕನ್ನಡ ಕಂಠ ಗಾಯನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕಂಠ ಗಾಯನ ಕಾರ್ಯಕ್ರಮದ ಯಶಸ್ಸಿಗೆ ತಾಲ್ಲೂಕು ಆಡಳಿತ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ಸಹಭಾಗಿತ್ವದಲ್ಲಿ ಏಕಕಾಲದಲ್ಲಿ ಐದು ಸಹಸ್ರ ಮಂದಿಯಿಂದ ವಿನೂತನವಾಗಿ ನ.11 ರಂದು ಕುಶಾಲನಗರ ಪಟ್ಟಣದ ರಥಬೀದಿ ಹಾಗೂ ಪ್ರವಾಸಿ ಮಂದಿರ (ಐ.ಬಿ.) ರಸ್ತೆಯಲ್ಲಿ ಎಲ್ಲರೂ ಜತೆಗೂಡಿ ಕಂಠ ಗಾಯನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸುವ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಧಾರ ಕೈಗೊಂಡು ಕಂಠ ಗಾಯನವನ್ನು ಯಶಸ್ವಿಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಐದು ಸಹಸ್ರ ಮಂದಿ ಒಂದೆಡೆ ಸೇರಿ ಕಂಠ ಗಾಯನ ಹಾಡುವ ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಬೇಕು ಎಂದು ಮನವಿ ಮಾಡಿದರು. ಕನ್ನಡ ಭಾಷೆ, ನಾಡು- ನುಡಿ, ಕಲೆ, ಸಂಸ್ಕೃತಿ, ಸಾಹಿತ್ಯ-ಪರಂಪರೆಯನ್ನು ಎತ್ತಿಹಿಡಿಯುವ ಕೆಲಸಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು. ತಾವು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿವುದಾಗಿ ತಿಳಿಸಿದರು. ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಎಲ್ಲಾ ಸಂಘ- ಸಂಸ್ಥೆಗಳು,ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಮತ್ತು ನಾಗರಿಕರು ಕೈಜೋಡಿಸಬೇಕು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರನ್ನು ಆಹ್ವಾನಿಸಲಾಗುವುದು. ಈ ಸಂಬಂಧ ತಕ್ಷಣದಲ್ಲೇ ಅಧಿಕಾರಿಗಳು ಹಾಗೂ ಸಂಘ- ಸಂಸ್ಥೆಗಳ ಸಭೆ ನಡೆಸಿ ಕಾರ್ಯಕ್ರಮದ ಅಂತಿಮ ರೂಪುರೇಷೆ ಕುರಿತು ಚರ್ಚಿಸಲಾಗುವುದು ಎಂದು ಶಾಸಕ ಡಾ ಮಂತರ್ ಗೌಡ ಹೇಳಿದರು. ಕಂಠ ಗಾಯನ ಕಾರ್ಯಕ್ರಮದ ಸಂಘಟನೆ ಹಾಗೂ ರೂಪುರೇಷೆ ಕುರಿತು ವಿಷಯ ಮಂಡಿಸಿದ ಕುಶಾಲನಗರ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಕ.ಸಾ.ಪ.ವತಿಯಿಂದ ನ.11 ರಂದು ಹಮ್ಮಿಕೊಂಡಿರುವ ಕಂಠ ಗಾಯನವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಎಲ್ಲೆಡೆ ಕನ್ನಡದ ಕಂಪು ಹರಡಿಸುವ ಮೂಲಕ ಎಲ್ಲರೂ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕ.ಸಾ.ಪ.ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಎಲ್ಲರೂ ಶಿಸ್ತುಬದ್ಧವಾಗಿ ಕನ್ನಡ ಬಾವುಟ ಹಿಡಿದು ಕನ್ನಡದ ಕಂಪನ್ನು ಮೂಡಿಸುವ ಮೂಲಕ ಕಾರ್ಯಕ್ರಮದ ಯಶಸ್ವಿ ಸಂಘಟನೆಗೆ ವಿವಿಧ ಉಪ ಸಮಿತಿಗಳಿಗೆ ಜವಾಬ್ದಾರಿ ಕೆಲಸ ಹಂಚಿಕೆ ಮಾಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಕಾರ್ಯಕ್ರಮದ ಯಶಸ್ಸು ಸಾಧ್ಯ ಎಂದರು. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕಂಠ ಗಾಯನ ಕಾರ್ಯಕ್ರಮವು ವಿನೂತನ ಪ್ರಯೋಗವಾಗಿದ್ದು, ಇದೊಂದು ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಿ ಮೈಲಿಗಲ್ಲಾಗಲಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವ ಕುರಿತು ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಉದ್ಯಮಿ ಎಂ.ಕೆ.ದಿನೇಶ್ ಮಾಹಿತಿ ನೀಡಿದರು. ಜಿಲ್ಲಾ ಕ.ಸಾ.ಪ. ಸಮಿತಿಯ ಸದಸ್ಯೆ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ತಾಲ್ಲೂಕು ಕ.ಸಾ.ಪ.ಕಾರ್ಯದರ್ಶಿಗಳಾದ ಟಿ.ವಿ.ಶೈಲಾ, ಎಸ್.ನಾಗರಾಜ್, ಕೋಶಾಧಿಕಾರಿ ಕೆ.ವಿ.ಉಮೇಶ್, ಸಮಿತಿಯ ಪ್ರಮುಖರಾದ ಎಂ.ಎನ್.ಕಾಳಪ್ಪ, ಬಿ.ಎಸ್.ಪರಮೇಶ್, ಡಿ.ಎಸ್.ಸೋಮಶೇಖರ್, ಟಿ.ಬಿ.ಮಂಜುನಾಥ್, ವಿವಿಧ ಸಂಸ್ಥೆಗಳ ಪ್ರಮುಖರಾದ ದೀಪಾ ಪೂಜಾರಿ, ಟಿ.ಜಿ.ಪ್ರೇಮಕುಮಾರ್, ಜಕ್ರಿಯಾ, ಎಂ.ಡಿ.ಕೃಷ್ಣಪ್ಪ, ಎಸ್.ಶಾಂಭಶಿವಮೂರ್ತಿ, ಡಿ.ವಿ.ರಾಜೇಶ್, ನಾಸೀರ್, ಲತಾ ರಮೇಶ್, ಚಿತ್ರ ರಮೇಶ್, ರೋಶನ್ ಹಾಗೂ ಮುಂತಾದ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.