ವಿರಾಜಪೇಟೆ ಅ.25 NEWS DESK : ಗ್ರಂಥಾಲಯಗಳ ಡಿಜಿಟಲೀಕರಣದಿಂದ ಜ್ಞಾನದ ಪ್ರಸಾರವಾಗಿ ವಿಸ್ತರಣೆಯಾಗುತ್ತ ಹೋಗುತ್ತದೆ ಎಂದು ಬೆಂಗಳೂರಿನ ಈಸಿಲಿಬ್ ಸಾಫ್ಟ್ ವೇರ್ ಹಾಗೂ ಫೈನ್ ವೆನ್ ಸಿಸ್ಟಮ್ ಟೆಕ್ನಾಲಜಿಯ ಸಿಇಓ ವಾಸು ಎ.ದೇಶಪಾಂಡೆ ಅಭಿಪ್ರಾಯಪಟ್ಟರು. ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಆಯೋಜಿಸಲಾಗಿದ್ದ ಈಸಿಲಿಬ್ ಸಾಫ್ಟ್ ವೇರ್ ಕುರಿತ ಗ್ರಂಥಪಾಲಕರ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕ್ಲಾವುಡ್ ವರ್ಷನ್ ನ ಪರಿಣಾಮಕಾರಿ ಬಳಕೆ ಪ್ರಮುಖವಾಗಿದ್ದು, ಇದು ಆಧುನಿಕ ತಂತ್ರಾಂಶವನ್ನು ಪರಿಚಯಿಸುತ್ತದೆ. ಓದುಗರಿಗೆ ಇದು ಉಪಯುಕ್ತವಾಗಿದ್ದು, ತನ್ನತ್ತ ಸೆಳೆಯುತಿದೆ ಎಂದರು. ಮಾತ್ರವಲ್ಲದೆ ಡಿಜಿಟಲೀಕರಣದ ಬಳಕೆ ಹೆಚ್ಚಿದಂತೆ ಅಧ್ಯಯನ ವ್ಯಾಪ್ತಿ ವಿಸ್ತಾರವಾಗುತ್ತಿದ್ದು ಸಿಬ್ಬಂದಿಗಳಿಗೂ ಸರಳ ವಿಧಾನವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು, ಪುಸ್ತಕವನ್ನು ಓದುವುದರಿಂದ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪುಸ್ತಕ ಓದುವುದು ಅತೀ ಮುಖ್ಯವಾಗಿದ್ದು ಸಂದರ್ಭಕ್ಕೆ ಅನುಸಾರವಾಗಿ ಬದಲಾಗುತ್ತಿರುವ ವಿಚಾರಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ನಿರಂತರವಾಗಿ ಭೇಟಿಯನ್ನು ನೀಡಿ ಅಧ್ಯಯನಶೀಲರಾಗಬೇಕು. ಪರೀಕ್ಷೆಯ ಜೊತೆಗೆ ಜೀವನ ಮೌಲ್ಯಗಳನ್ನು ಅರಿತು ಆದರ್ಶವಾಗಿರಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ವಿಷಾಧವನ್ನು ವ್ಯಕ್ತಪಡಿಸಿದರು. ಕಾಲೇಜಿನ ಗ್ರಂಥಪಾಲಕರಾದ ಹಿಲ್ಡ್ರೆಡ್ ಮೆನೇಜೆಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಸಹಾಯಕ ಗ್ರಂಥಪಾಲಕರಾದ ಲವೀನಾ ಹಾಜರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳ ಗ್ರಂಥಪಾಲಕರು ಹಾಗೂ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.