ಮಡಿಕೇರಿ ಅ.25 NEWS DESK : ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ದೃಢ ವಿಶ್ವಾಸದಿಂದ ಮಾಡಬೇಕು ಮತ್ತು ಕಂಡ ಕನಸನ್ನು ನನಸು ಮಾಡಿಕೊಳ್ಳಲು ಶ್ರಮವಹಿಸಬೇಕು. ಆಗ ಮಾತ್ರ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಕರ್ನಲ್ ಕೆ.ಸಿ.ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ನಡೆದ ರೀಬಿಲ್ಡ್ ಕೊಡಗು ಸಂಸ್ಥೆ (ಟೈಮ್ ಟು ಗಿವ್ ಬ್ಯಾಕ್ and ಜಾಯ್ ಆಫ್ ಗಿವಿಂಗ್)ಯ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಶೈಕ್ಷಣಿಕ ಸಾಧನೆ ಮಾಡಬೇಕು. ಪ್ರತಿಯೊಬ್ಬರು ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು, ಆ ನಿಟ್ಟಿನಲ್ಲಿ ತಮ್ಮ ಸಂಪಾದನೆಯಲ್ಲಿ ಶೇ.10ರಷ್ಟು ಹಣವನ್ನು ಸಮಾಜ ಸೇವೆಗಾಗಿ ಮೀಸಲಿಡಬೇಕು. ಇದು ಸಮಾಜದ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು. ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ರೀಬಿಲ್ಡ್ ಕೊಡಗು ಸಂಸ್ಥೆ ಜನರ ಸಮಸ್ಯೆಗಳನ್ನು ಅರಿತು ಅವರ ಅವಶ್ಯಕತೆಗಳಿಗೆ ಸ್ಪಂದಿಸಿರುವುದು ಶ್ಲಾಘನೀಯ. ಅನೇಕ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ಅವರು ಕೊಡಗಿನ ಜನತೆಗೆ ಏಕಾಂಗಿಯಾಗಿ ಪರಿಹಾರವನ್ನು ಒದಗಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ. ಇವರ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿಯಾಗಿದೆ. ಈ ಸೇವೆ ನಿರಂತರವಾಗಿ ನಡೆಯಲಿ ಎಂದು ಕೆ.ಸಿ.ಸುಬ್ಬಯ್ಯ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೀಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ (ಕೇಳಪಂಡ), ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆಯನ್ನು ಬಿಟ್ಟು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ತಾವು ಕಲಿತ ಶಾಲೆ, ಶಿಕ್ಷಕರು ಹಾಗೂ ಉತ್ತಮ ಕೆಲಸಕ್ಕೆ ಪ್ರೇರಿಪಿಸದವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ಕೆಲಸದಲ್ಲಾದರೂ ಸ್ವಾರ್ಥವನ್ನು ಬಿಟ್ಟು ಸಹಕಾರ ಮನೋಭವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಣ, ಖ್ಯಾತಿ ಸಂಪಾದನೆ ಜೊತೆಗೆ ಸಮಾಜ ಸೇವೆಯಲ್ಲೂ ಹೆಚ್ಚು ತೊಡಸಿಕೊಳ್ಳಬೇಕು. ಮಕ್ಕಳು ದೇವರಿಗೆ ಸಮಾನ, ಆದ್ದರಿಂದ ಭವಿಷ್ಯದ ಬಗ್ಗೆ ಈಗಿನಿಂದಲೇ ಚಿಂತಿಸಿ ಗುರಿ ಸಾಧಿಸಬೇಕು ಎಂದರು. ಜಿಲ್ಲೆಯಲ್ಲಿ 2018-19ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ರೀಬಿಲ್ಡ್ ಕೊಡಗು ಸಂಸ್ಥೆ ಹುಟ್ಟಿಕೊಂಡಿದ್ದು, ಸಂಸ್ಥೆಯ ಮೂಲಕ ನಿರಂತರವಾಗಿ ಸಮಾಜ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಸ್ಥೆಗೆ ಪ್ರಪಂಚದಾದ್ಯಂತದ ಆತ್ಮೀಯರು ಕೊಡುಗೆ ನೀಡಿದ್ದು, ಇದರಿಂದ ಪ್ರವಾಹ ಪೀಡಿತರಿಗೆ ತಾತ್ಕಾಲಿಕ ಆಶ್ರಯ, ಆಹಾರ, ದಿನಸಿ, ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಾಯಿತು. ಇಲ್ಲಿಯವರೆಗೆ ನಮ್ಮ ಪ್ರಯಾಣ ಫಲಪ್ರದವಾಗಿದೆ ಮತ್ತು ತೃಪ್ತಿಕರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಕೆ.ಎ.ಕುಶಾಲಪ್ಪ, ನಮ್ಮ ಪ್ರಯತ್ನದಿಂದ ಸಾವಿರಾರು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಇದೀಗ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಇದರಿಂದ ಸಂಬಂಧಗಳಿಗೆ, ಜ್ಞಾನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮೊದಲು ವಯಸ್ಸು, ಸಂಬಂಧ, ಜ್ಞಾನ ನಂತರ ಹಣಕ್ಕೆ ಬೆಲೆ ನೀಡಬೇಕು, ಆಗ ಬದುಕು ಸುಂದರವಾಗಿರುತ್ತದೆ ಎಂದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಹೆಚ್ಚಿನ ಸೌಲಭ್ಯ ದೊರೆಯುತ್ತಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉತ್ತಮ ನಾಗರೀಕರಾಗಿ ಬದುಕುವಂತೆ ಕರೆ ನೀಡಿದರು. ರೋಟರಿ ಸಂಸ್ಥೆಯಿಂದ ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಮಾಡುವ ಹಲವು ಕಾರ್ಯಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಭಾರತವನ್ನು ಪೊಲಿಯೋ ಮುಕ್ತಗೊಳಿಸುವಲ್ಲಿ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ತಾವು ಹುಟ್ಟಿದ ಊರಿಗೆ ಏನಾದರು ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೀಬಿಲ್ಡ್ ಸಂಸ್ಥೆ ರೋಟರಿ ಸಂಸ್ಥೆಯಂತೆ ಹೆಮ್ಮರವಾಗಿ ಬೆಳೆಯಲಿ ಎಂದರು.
ಇನ್ನರ್ ವೀಲ್ ಅಧ್ಯಕ್ಷರಾದ ಅಗ್ನೇಸ್ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಗುರಿ ಸಾಧಿಸಬೇಕು. ಪೋಷಕರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು. ಬೆಂಗಳೂರಿನ ರೀಇನ್‍ವೆಂಟ್ ಅಪಾರಲ್ಸ್ ನ ನಿರ್ದೇಶಕರಾದ ಅಭಿತಾ ಜೈನ್ ಬಾಬೆಲ್, ರೋಟರಿ, ಇನ್ನರ್ ವಿಲ್ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇನ್ನರ್ ವೀಲ್ ಖಜಾಂಚಿ ದಿವ್ಯ ಮುತ್ತಣ್ಣ ಸ್ವಾಗತಿಸಿ, ನಿರೂಪಿಸಿದರು. ರೀಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ವಂದಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಅರೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 60 ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್ ಹಾಗೂ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು, ಅಲ್ಲದೆ ಅತಿಥಿಗಳನ್ನು ಗೌರವಿಸಲಾಯಿತು.