ಮಡಿಕೇರಿ ಅ.28 NEWS DESK : ಜೀವವಿಮೆಗೆ ಸಂಬಂಧಿಸಿದಂತೆ ತರಲಾಗಿರುವ ಹೊಸ ಆದೇಶಗಳನ್ನು ವಿರೋಧಿಸಿ ಜೀವವಿಮಾ ನಿಗಮದ ಪ್ರತಿನಿಧಿಗಳು ಸೋಮವಾರ ಮಡಿಕೇರಿಯಲ್ಲಿ ಅಸಹಕಾರ ಚಳವಳಿ ನಡೆಸಿದರು. ಮಡಿಕೇರಿ ಜೀವವಿಮಾ ನಿಗಮದ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷ ಎ.ವಿ.ಮಂಜುನಾಥ್ ಅವರ ನೇತೃತ್ವದಲ್ಲಿ ಎಲ್‍ಐಸಿ ಕಛೇರಿಯ ಮುಂಭಾಗ ಸೇರಿದ ಪ್ರತಿನಿಧಿಗಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಇತ್ತೀಚೆಗೆ ಕ್ಲಾ ಬ್ಯಾಕ್ ಎನ್ನುವ ಆದೇಶ ತರಲಾಗಿದ್ದು, ಇದರಿಂದ ಒಂದು ಲಕ್ಷ ಮೊತ್ತದ ವಿಮೆಯನ್ನು ವರ್ಷದ ಒಳಗೆ ಹಿಂದಿರುಗಿಸಿದಲ್ಲಿ, ಅದಕ್ಕೆ ಸಂಬಂಧಿಸಿದ ಏಜೆಂಟರ ಕಮಿಷನ್ ಮತ್ತು ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತಿದೆ. ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಮಂಜುನಾಥ್ ಆಗ್ರಹಿಸಿದರು. ಹೊಸ ಜೀವವಿಮಾ ಪಾಲಿಸಿಗಳನ್ನು ತರಲಾಗಿದ್ದು, ಇವುಗಳ ಪ್ರೀಮಿಯಂನನ್ನು ಶೇ.7.50 ಯಷ್ಟು ಹೆಚ್ಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಎಸ್‍ಟಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಎಲ್‍ಐಸಿ ಪ್ರತಿನಿಧಿಗಳ ಸಂಘಟನೆಯ ಉಪಾಧ್ಯಕ್ಷರಾದ ಟಿ.ಎಲ್.ಅನಿತಾ, ಕೆ.ಪಿ.ಗಣೇಶ್, ಖಜಾಂಚಿ ಚಾಮ, ಹಿರಿಯ ಪ್ರತಿನಿಧಿಗಳಾದ ಬೆಳ್ಯಪ್ಪ, ವೈ.ಡಿ.ಮೋಹನ್, ಪಿ.ಆರ್.ಮಂದಪ್ಪ, ಮಹಿಳಾ ಘಟಕದ ಸವಿತಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.