ಸಿದ್ದಾಪುರ ಅ.29 NEWS DESK : ಇತಿಹಾಸ ಪ್ರಸಿದ್ದ ಐದ್ರೋಡಮ್ಮ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 16ನೇ ವರ್ಷದ ದೀಪಾವಳಿ ಹಬ್ಬದ ವಾರ್ಷಿಕ ಉತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಂಡಿರುವದಾಗಿ ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ಅರ್ಚಕ ತಿರುಮಲ ರಾಜನ್, ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಾವಳಿಯಂದು ಅದ್ದೂರಿಯಾಗಿ ವಾರ್ಷಿಕ ಉತ್ಸವ ಆಚರಿಸಲಾಗುತ್ತಿದ್ದು, ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರುಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸಮಿತಿ ಮೂಲಕ ದೇವಸ್ಥಾನದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರದ ಮೂಲಕ ಕುಡಿಯುವ ನೀರು, ಸಭಾಂಗಣ, ಆವರಣ ಸೇರಿದಂತೆ ಇತರ ಸೌಕರ್ಯಗಳನ್ನು ಮಾಡಲಾಗಿದೆ. ಅ.31 ಹಾಗೂ ನ.1 ರಂದು ದೇವಾಲಯದ ವಾರ್ಷಿಕೋತ್ಸವ ನಡೆಯಲಿದೆ ಎಂದು ಹೇಳಿದರು. ದೇವಾಲಯದ ಅಧ್ಯಕ್ಷ ರವಿಕುಮಾರ್ ಮಾತನಾಡಿ ನ.31ರಂದು ಸಂಜೆ ಪುಷ್ಪಾಲಂಕಾರ, ದೀಪಾರಾಧನೆ ನಂತರ ವಿಶೇಷ ಪೂಜೆ ನಡೆಯಲಿದ್ದು, ರಾತ್ರಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು. ನ.1 ರಂದು ಬೆಳಿಗ್ಗೆ ಕಳಶ ಪೂಜೆ, ಪುಷ್ಪಾರ್ಚನೆ, ಕುಂಕುಮಾರ್ಚನೆ ನಂತರ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜವರಯ್ಯ, ಸದಸ್ಯರಾದ ರಮೇಶ, ಗಣೇಶ, ಪ್ರಸಾದ್ ಹಾಜರಿದ್ದರು.