ಕುಶಾಲನಗರ, ಅ.30 NEWS DESK : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ಕುಶಾಲನಗರ ಫಾತಿಮ ಪ್ರೌಢಶಾಲೆಯಲ್ಲಿ ಇಕೋ ಕ್ಪಬ್ ವತಿಯಿಂದ ಸ್ವಚ್ಛ ಹಾಗೂ ಸ್ವಸ್ಥ ದೀಪಾವಳಿ ಗೋ ಗ್ರೀನ್ ಅಭಿಯಾನದ ಅಂಗವಾಗಿ ಕುಶಾಲನಗರ ಫಾತಿಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಣತೆ ಬೆಳಗಿಸಿ, ಹಸಿರು ದೀಪಾವಳಿ ಆಚರಿಸುವ ಮೂಲಕ ಸಂಭ್ರಮಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಮಾಲಿನ್ಯ ತಡೆಯಿರಿ ಎಂಬ ಘೋಷವಾಕ್ಯದೊಂದಿಗೆ ಮಣ್ಣಿನ ಹಣತೆ ( ದೀಪ) ಬೆಳಗಿಸಿ ಹಸಿರು ದೀಪಾವಳಿ ಆಚರಿಸುವ ಕುರಿತ ಪರಿಸರ ಸಂದೇಶ ಸಾರಿದರು. ಹಸಿರು ದೀಪಾವಳಿ ಆಚರಣೆಗೆ ಚಾಲನೆ ನೀಡಿದ ಶಾಲೆಯ ಮುಖ್ಯ ಶಿಕ್ಷಕ ಜಫ್ರಿ ಡಿ’ಸಿಲ್ವ, ವಿದ್ಯಾರ್ಥಿಗಳೆಲ್ಲರೂ ಪಟಾಕಿ ತ್ಯಜಿಸಿ ಹಣತೆ ಬೆಳಗಿಸುವ ಮೂಲಕ ಹಸಿರು ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು. ಹಸಿರು ದೀಪಾವಳಿ ಆಚರಣೆ ಕುರಿತು ಶಿಕ್ಷಕಿ ಅನಿತಾ ಸುಪ್ರಿಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಹಣತೆ ಬೆಳಗಿಸಿ, ದೀಪಾವಳಿ ಆಚರಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಜಿಲ್ಲಾ ಗೈಡ್ಸ್ ವಿಭಾಗದ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ ಮಾತನಾಡಿ, ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ಸಿಡಿದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಹಸಿರು ದೀಪಾವಳಿ ಆಚರಣೆಯ ಮಹತ್ವ ತಿಳಿಸಿದ ವಿಜ್ಞಾನ ಶಿಕ್ಷಕ ಕಿರಣ್ ಪ್ರದೀಪ್ ಪೌಲ್, ಹಸಿರು ದೀಪಾವಳಿ ಕುರಿತ ಪರಿಸರ ಘೋಷಣೆಗಳನ್ನು ತಿಳಿಸಿದರು. ಸ್ಕೌಟ್ ಮಾಸ್ಟರ್ ಎಂ.ಎಲ್.ಜಾನ್ಸನ್, ಗೈಡ್ ಕ್ಯಾಪ್ಟನ್ ಶಿಫಾನತ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ನಂತರ ವಿದ್ಯಾರ್ಥಿಗಳು ಮಣ್ಣಿನ ಗಣತಿಯನ್ನು ಬೆಳಗಿಸುವ ಮೂಲಕ ಪಟಾಕಿ ತ್ಯಜಿಸಿ-ಮಾಲಿನ್ಯ ತಡೆಯಿರಿ, ಹಸಿರು ದೀಪಾವಳಿ- ಆಚರಿಸೋಣ ಬನ್ನಿ, ಹಸಿರು ದೀಪಾವಳಿ-ಪರಿಸರ ದೀಪಾವಳಿ – ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಪ್ರಚುರಪಡಿಸಿದರು.