ಶನಿವಾರಸಂತೆ ನ.2 NEWS DESK : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ರಾಷ್ಟ್ರೀಯ ಹಸಿರು ಪಡೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಹಯೋಗದೊಂದಿಗೆ ಶನಿವಾರಸಂತೆ ಹೋಬಳಿಯ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ನ.1 ರಂದು ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಯಲ್ಲಿ ಜತೆಗೂಡಿ ಹಣತೆ ಬೆಳಗಿಸಿ ಹಸಿರು ದೀಪಾವಳಿ ಆಚರಿಸುವ ಕುರಿತು ಪ್ರತಿಜ್ಞೆ ಸ್ವೀಕರಿಸಿದರು. “ಸ್ವಚ್ಛ ದೀಪಾವಳಿ – ಸ್ವಸ್ಥ ದೀಪಾವಳಿ” ಆಚರಣೆ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ, ಪರಿಸರಕ್ಕೆ ಹಾನಿಯುಂಟು ಮಾಡುವ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು. ಹಸಿರು ದೀಪಾವಳಿ ಆಚರಣೆ ಕುರಿತು ಮಾಹಿತಿ ವಿದ್ಯಾರ್ಥಿಗಳಿಗೆ ನೀಡಿದ ಇಕೋ ಕ್ಲಬ್ ಘಟಕದ ಉಸ್ತುವಾರಿ ಶಿಕ್ಷಕ ಡಿ.ಎಸ್. ಮಧುಕುಮಾರ್ , ಮಾಲಿನ್ಯಕಾರಿಲ ಪಟಾಕಿ ತ್ಯಜಿಸಿ ಹಸಿರು ಪಟಾಕಿಯನ್ನು ಮಾತ್ರ ಬಳಕೆ ಮಾಡಲು ಸುಪ್ರೀಂ ಸೂಚಿಸಿದ್ದು, ಇದರನ್ವಯ ನಾವು ಹಸಿರು ದೀಪಾವಳಿ ಆಚರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಕೊಡಗು ಜಿಲ್ಲೆಯಲ್ಲಿ ಹಸಿರು ದೀಪಾವಳಿ ಆಚರಣೆ ಕುರಿತ ಜನಜಾಗೃತಿ ಮೂಡಿಸುತ್ತಿದ್ದು, ಇದರಿಂದ ಪಟಾಕಿ ಮಾರಾಟ ಕೂಡ ಕ್ಷೀಣಿಸಿದೆ ಎಂದರು. ಹಿರಿಯ ಶಿಕ್ಷಕರಾದ ಎಂ.ವಿ.ರೂಪ , ಶಿಕ್ಷಕಿಯರಾದ ಡಿ.ಎಂ.ಮಹಾದೇವಿ, ಪ್ರಿಯಾಂಕಾ ಚಿಪಳೂಣಕರ್ , ಗೀತಾ , ಮಾರುತಿ ಅರೇರ್, ಮುಖ್ಯ ಅಡುಗೆಯವರಾದ ನೇತ್ರಾವತಿ, ವಿದ್ಯಾರ್ಥಿಗಳು ಇದ್ದರು. ಹಣತೆ ಬೆಳಗಿಸಿ- ದೀಪಾವಳಿ ಆಚರಿಸಿ,ಮಾಲಿನ್ಯಕಾರಿ ಪಟಾಕಿ ತ್ಯಜಿಸಿ – ಹಸಿರು ದೀಪಾವಳಿ ಆಚರಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.