ಮಡಿಕೇರಿ NEWS DESK ನ.6 : ಕೊಡವ ಲ್ಯಾಂಡ್ ನಲ್ಲಿ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಡೆಯದಿದ್ದಲ್ಲಿ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಆದಿಮಸಂಜಾತ ಕೊಡವ ಕುಲದ ಅಸ್ತಿತ್ವಕ್ಕೆ ದಕ್ಕೆ ಬರಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ಬುಟ್ಟಂಗಾಲ ಜಂಕ್ಷನ್ ನಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದಾಪುರದ ಸಾವಿರಾರು ಎಕರೆ ಕಾಫಿ ತೋಟ ಸೇರಿದಂತೆ ಕೊಡಗಿನ ವಿವಿಧೆಡೆ ಕೃಷಿಭೂಮಿಯಲ್ಲಿ ಬೃಹತ್ ನಗರ ನಿರ್ಮಿಸುವ ಹುನ್ನಾರ ನಡೆಯುತ್ತಿದೆ. ಬರಪೊಳೆ, ಕೊಂಗಣಪೊಳೆ, ಕಾವೇರಿ ನದಿಯ ಉಪ ನದಿಗಳಿಗೆ ಜೀವ ಸೆಲೆಯಾಗಿರುವ ಕೊಡವ ಲ್ಯಾಂಡ್‌ನ ಆಯಕಟ್ಟಿನ ಸ್ಥಳವಾದ ಪೆರುಂಬಾಡಿ, ಬಾಳುಗೋಡು, ನಾಂಗಾಲ, ಬುಟ್ಟಂಗಾಲದಲ್ಲ್ಲಿ 2020-21ರ ಭೂಸುಧಾರಣಾ ತಿದ್ದುಪಡಿ ಕಾಯ್ದೆ ದುರ್ಬಳಕೆಯಾಗುತ್ತಿದೆ. ಬಂಡವಾಳಶಾಹಿ, ರೆಸಾರ್ಟ್ ಮಾಫಿಯಾ ಹಾಗೂ ಟೌನ್‌ಶಿಪ್ ಧಣಿಗಳು, ಹವಾಲ ದಂಧೆಕೋರರು ತಮ್ಮ ಕರಾಳ ವಿಷ ವರ್ತುಲಗಳ ಮೂಲಕ ಇಡೀ ಪ್ರದೇಶದ ಕೃಷಿ ಭೂಮಿಯನ್ನು ಕಬ್ಜ ಮಾಡುತ್ತಿದ್ದಾರೆ. ಜಲಮೂಲ ಬಸಿದು ಗುಡ್ಡ-ಬೆಟ್ಟ ಕೊರೆದು ಕಾಡು, ಪ್ರಾಕೃತಿಕ ಸಂಪನ್ಮೂಲ ಲೂಟಿಮಾಡಿ ಕೊಡವ ಜನಪದ ಸಂಸ್ಕೃತಿಯ ಗರ್ಭಗುಡಿಯಾದ “ಮಂದ್”, ಗ್ರಾಮದೇವತೆ – ನಾಡ್ ದೇವತೆಗಳ ನೆಲೆಗಳನ್ನು ಧ್ವಂಸ ಮಾಡಿ ಕೊಡವ ಜನಾಂಗೀಯ ಹೆಗ್ಗುರುತಿನ ನರಮಂಡಲವಾಗಿರುವ ಪೆರವನಾಡ್, ಬೇರಳಿನಾಡ್ ಮತ್ತು ಕುತ್ತ್ನಾಡ್ ಪ್ರದೇಶದ ಜನಸಂಖ್ಯಾ ಪಲ್ಲಟಕೆ ಸಂಚು ರೂಪಿಸುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ದಕ್ಷಿಣ ಭಾರತದ ದೊಡ್ಡ ರಾಜಕಾರಣಿಯೊಬ್ಬರು ಬುಟ್ಟಂಗಾಲ ಪ್ರದೇಶದಲ್ಲಿ ಕೃಷಿ ಭೂಮಿ ಖರೀದಿಸಿ ಬೃಹತ್ ನಗರ ಹಾಗೂ ಆರ್ಥಿಕ ಕಾರಿಡಾರ್ ರೂಪಿಸುವ ಹುನ್ನಾರದಲ್ಲಿದ್ದಾರೆ. ಈ ಎಲ್ಲಾ ಅನಾಹುತಗಳಿಂದ ಮುಕ್ತಿ ಪಡೆಯಲು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಆದಿಮಸಂಜಾತ ನಗಣ್ಯ ಕೊಡವ ಕುಲಕ್ಕೆ ರಾಜ್ಯಾಂಗದತ್ತವಾಗಿ ಎಸ್‌ಟಿ ಟ್ಯಾಗ್ ಮತ್ತು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ನಿರ್ಣಯ ಅಧಿಕಾರ ಪಡೆಯುವುದೊಂದೆ ಸಿದ್ಧೌಷದವಾಗಿದೆ ಎಂದು ಪ್ರತಿಪಾದಿಸಿದರು. ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದ್ದು, ಇವರು ಇಂದು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್ ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ. ಟೌನ್‌ಶಿಪ್, ವಿಲ್ಲಾ ಮತ್ತು ರೆಸಾರ್ಟ್ಗಳ ಮೂಲಕ ಕೊಡವ ಲ್ಯಾಂಡ್‌ನ ಪಾವಿತ್ರತೆಯನ್ನು ಮಲಿನಮಾಡಿ ಜಲಮೂಲ ಬಸಿದು, ಭೂಗರ್ಭ ಸೀಳಿ ರಮಣೀಯ ನಿಸರ್ಗ, ಮನಮೋಹಕ ಪರ್ವತ ಶ್ರೇಣಿಗಳನ್ನು ನಾಶಮಾಡಲಾಗುತ್ತಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಬರುವ ಪೇರೂರು ಬಲ್ಲಮಾವಟಿ ಪ್ರದೇಶದಲ್ಲಿ ಬರುವ ಕಾವೇರಿಯ ಉಪನದಿ “ಕಪ್ಪೊಳೆಯ” ಜಲಮೂಲವನ್ನು ಧ್ವಂಸಮಾಡುವ ಪ್ರಯತ್ನಗಳು ನಡೆಯುತ್ತಿದೆ. ಜಲದೇವತೆ ಕಾವೇರಿಯ ಪುಣ್ಯಸ್ಥಳವು ಸುಪ್ರಸಿದ್ಧ ತೀರ್ಥಯಾತ್ರ ಕ್ಷೇತ್ರವಾಗಿದ್ದು, ಇದು ಪ್ರವಾಸಿ ತಾಣವಾಗುವ ಬದಲು ಆಧ್ಯಾತ್ಮಿಕ, ಪಾರಮಾರ್ಥಿಕ ನೆಲೆಯಾಗಿ ಉಳಿದು ಮುಂದುವರೆಯಬೇಕು ಎಂದು ಒತ್ತಾಯಿಸಿದರು. ಕೊಡವರ ಸ್ವಾಧೀನದಲ್ಲಿರುವ ಯುಗ ಯುಗಗಳ ಭೂಮಿಯನ್ನು ಕೊಡವರಿಗೆ 30 ವರ್ಷಗಳ ಗುತ್ತಿಗೆಗೆ ನೀಡುವ ಸರ್ಕಾರದ ಯೋಜನೆಯನ್ನು ಈ ದುಷ್ಟಕೂಟ ವಿಫಲಗೊಳಿಸಲು ಯತ್ನಿಸುವ ಮೂಲಕ ಕೊಡವರನ್ನು ಸಂಕಷ್ಟ ಮತ್ತು ಆತಂಕಕ್ಕೆ ತಳ್ಳಿದ್ದಾರೆ. ಬಂಡವಾಳ ಶಾಹಿಗಳು ಮತ್ತು ಅವರು ಕರೆ ತಂದ ಜನರಿಂದ ಇಲ್ಲಿನ ಪರಿಸರ, ಪ್ರಕೃತಿ, ಸಂಸ್ಕೃತಿ, ಜಲಮೂಲ, ಸಾಮಾಜಿಕ ಸಂರಕ್ಷಣೆ ಮತ್ತು ಜನಾಂಗೀಯ ಶಾಸ್ತç ಸಂಪೂರ್ಣ ಬುಡಮೇಲಾಗುತ್ತಿದೆ. ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಕಪ್ಪು ಹಣ ಹೊಂದಿರುವವರು ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಪತಿಗಳು ಹಾಗೂ ಬಂಡವಾಳಶಾಹಿಗಳು ಇಡೀ ಕೊಡಗಿನಲ್ಲಿ ವ್ಯಾಪಿಸಿದ್ದು, ಪಾಕೃತಿಕ ಕೊಡುಗೆಗಳನ್ನು ಆವರಿಸಿಕೊಂಡಿದ್ದಾರೆ. ಕೊಡವರು ನಡೆಸುತ್ತಿರುವ ಪರಿಸರ ಸ್ನೇಹಿ ಹೋಂಸ್ಟೇಗಳ ವಿರುದ್ಧ ರೆಸಾರ್ಟ್ ಮಾಫಿಯಾಗಳು ಸಂಚು ರೂಪಿಸುತ್ತಿವೆ. ಕೊಡವರು ಸಂಚರಿಸುವ ಸಾಂಪ್ರದಾಯಿಕ ರಸ್ತೆಗಳಿಗೆ ಬೇಲಿ ನಿರ್ಮಿಸಿ ಅಡ್ಡಿಪಡಿಸುತ್ತಿವೆ.
ಪ್ರಕೃತಿಯ ಮೇಲೆ ಯಾವುದೇ ರೀತಿಯ ದಾಳಿಯಾದರೂ ಆಡಳಿತ ವ್ಯವಸ್ಥೆ ಮಾತ್ರ ತಟಸ್ಥ ಧೋರಣೆ ಅನುಸರಿಸುತ್ತಿದೆ. ಗ್ರೀನ್ ಬೆಲ್ಟ್ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ, ಕೊಡವರು ಹೋರಾಟದ ಮೂಲಕ ವೇದನೆಯನ್ನು ಬಿಚ್ಚಿಟ್ಟರೂ ಯಾವುದೇ ಸ್ಪಂದನೆ ಮತ್ತು ರಕ್ಷಣೆ ಇಲ್ಲದಾಗಿದೆ. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‌ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಬಂಡವಾಳಶಾಹಿಗಳಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಲಿ. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಕರೆ ನೀಡಿದರು. ಮುದ್ದಿಯಡ ಲೀಲಾವತಿ, ಮಾಳೇಟಿರ ವಿಮಲ, ನೆಲ್ಲಮಕ್ಕಡ ಯಶೋಧ, ಪೊನ್ನಕಚ್ಚಿರ ಶೈಲಾ, ಮಳವಂಡ ಕವಿತಾ, ಪೊರ್ಕೊಂಡ ದಕ್ಷ, ಪೊರ್ಕೊಂಡ ನಿಶಾ, ಅಪ್ಪಂಡೆರಂಡ ಭವ್ಯ, ಮಾಚೆಟ್ಟಿರ ಚೋಟು ಕಾವೇರಪ್ಪ, ಕಾಳೆಂಗಡ ರಮೇಶ್, ಬುಟ್ಟಿಯಂಡ ಸೋಮಣ್ಣ, ಗುಡ್ಡಂಡ ದೀಪಕ್, ಮಾಚೆಟ್ಟಿರ ಸಚಿನ್, ಬೊಪ್ಪಂಡ ಸತೀಶ್, ಪೊನ್ನಕಚ್ಚಿರ ಎಸ್.ಪೂಣಚ್ಚ, ಕೇಳಪಂಡ ಗಣಪತಿ, ಕೊಟ್ಟಿಯಂಡ ಮಂಜು, ಪೊನ್ನಕಚ್ಚಿರ ಭೀಮಯ್ಯ, ಕುಪ್ಪಂಡ ಮನು, ಕುಪ್ಪಂಡ ಜಯ ಕರುಂಬಯ್ಯ, ಪೊನ್ನಕಚ್ಚಿರ ಬಿದ್ದಪ್ಪ, ಚೆಂದ್ರಿಮಾಡ ಚಂಗಪ್ಪ, ಪೊನ್ನಕಚ್ಚಿರ ಸಿ.ಪೂಣಚ್ಚ, ಮುದ್ದಿಯಡ ಮಾದಪ್ಪ, ಕೇಕಡ ನಾಣಯ್ಯ, ಚಂಗೆಟ್ಟಿರ ಸೋಮಯ್ಯ, ಗುಡ್ಡಂಡ ಎಸ್.ಪೂಣಚ್ಚ, ಕುಂಬೆರ ಬಿದ್ದಪ್ಪ, ಚೆಂದಂಡ ಗೌತಮ್, ಚೆಂದAಡ ಭೀಮಯ್ಯ, ಮೂಕಚಂಡ ಪ್ರಸನ್ನ ಸುಬ್ಬಯ್ಯ, ಬಲ್ಲಡಿಚಂಡ ಲೋಕನಾಥ್, ಕಂಜಿತಂಡ ಈರಪ್ಪ, ಕಂಜಿತಂಡ ಚಿಣ್ಣಪ್ಪ, ಕಂಬಿರAಡ ಮದನ್, ಕೇಳಪಂಡ ಸುಬ್ರಮಣಿ, ಚೆಂದಂಡ ಸೋಮಯ್ಯ, ನಂಬುಡುಮಾಡ ನಾಚಪ್ಪ, ಮಾಕಂಡ ಪಟ್ಟು ಪೂಣಚ್ಚ, ಪೊನ್ನಕಚ್ಚಿರ ಚರ್ಮಣ, ಪೊನ್ನಕಚ್ಚಿರ ಸುನೀಲ್ ಮಂದಣ್ಣ, ಕಂಜಿತಂಡ ಶರತ್, ಪೊರ್ಕೊಂಡ ಕುಞಪ್ಪ, ಮುಕ್ಕಾಟಿರ ಸುನಿಲ್, ಅರೆಯಂಡ ಅಯ್ಯಣ್ಣ, ಕುಪ್ಪಂಡ ಗೋಪಾಲ್, ಚಂಬಂಡ ಜನತ್, ಅಪ್ಪೆಯಂಗಡ ಮಾಲೆ, ಕಿರಿಯಮಾಡ ಶೆರಿನ್, ಅಜ್ಜಿಕುಟ್ಟಿರ ಲೋಕೇಶ್, ಕೊಂಗಂಡ ಮಾದಪ್ಪ, ಕೊಂಗಂಡ ಅರುಣ್, ಅಣ್ಣಳಮಾಡ ಹರೀಶ್, ಕುಪ್ಪಣಮಾಡ ಪ್ರೀತಮ್, ಕುಪ್ಪಂಡ ಸುರೇಶ್, ಕಳ್ಳಿಚಂಡ ರವಿ, ಪಟ್ಟಡ ರಂಜನ್ ತಿಮ್ಮಯ್ಯ, ನಂಬುಡುಮಾಡ ಅಪ್ಪಯ್ಯ, ಪೊನ್ನಕಚ್ಚಿರ ಪವಿತ್ರ, ಕುಲ್ಲಚಂಡ ಬೋಪಣ್ಣ, ಚೊಟ್ಟೆಮಂಡ ಪ್ರವೀಣ್ ಪಾಲ್ಗೊಂಡು ಸಿಎನ್‌ಸಿಯ ಬೇಡಿಕೆಗಳನ್ನು ಬೆಂಬಲಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.