ಮಡಿಕೇರಿ ನ.7 NEWS DESK : ಹಲವು ಹಗರಣಗಳ ಆರೋಪ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪರ ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಕೆಲವರು ನಡೆಸಿರುವ ಅರೆಬೆತ್ತಲೆ ಪ್ರತಿಭಟನೆ ಹಾಸ್ಯಾಸ್ಪದವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದಲ್ಲಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದವರು ಕಾಂಗ್ರೆಸ್ ಪಕ್ಷದ ಅಂಗಸಂಸ್ಥೆಗೆ ಸೇರಿದವರಂತೆ ವರ್ತಿಸಿ ಪರಿಶಿಷ್ಟರ ಹಾದಿ ತಪ್ಪಿಸುವ ಯತ್ನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ಪರಿಶಿಷ್ಟರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇತ್ತೀಚೆಗೆ ಬಯಲಿಗೆ ಬಂದಿರುವ ಹಗರಣಗಳೇ ಸಾಕ್ಷಿ ಹೇಳುತ್ತಿವೆ. ಪರಿಶಿಷ್ಟರ ಅಭ್ಯುದಯಕ್ಕಾಗಿ ಮೀಸಲಿಟ್ಟ ಸಾವಿರಾರು ಕೋಟಿ ರೂ. ಅನುದಾನ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಪರಿಶಿಷ್ಟರ ಅನುದಾನ ದುರುಪಯೋಗವಾಗಿದೆ, ಮೂಡ ಜಾಗ ನಿಯಮ ಬಾಹಿರವಾಗಿ ಮಂಜೂರಾಗಿದೆ. ಪರಿಶಿಷ್ಟರ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಇದೆಲ್ಲವನ್ನು ಮುಂದಿಟ್ಟುಕೊಂಡು ಪರಿಶಿಷ್ಟರ ಪರವಾಗಿ ಬಿಜೆಪಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಾ ಬರುತ್ತಿದೆ. ಆದರೆ ಕೆಲವರು ವಿನಾಕಾರಣ ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ಮತ್ತಷ್ಟು ಹಗರಣಗಳನ್ನು ನಡೆಸಲು ಪ್ರೇರಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ಶಿಕ್ಷಣ, ಸಂಘಟನೆ, ಹೋರಾಟ” ಎಂಬ ಘೋಷವಾಕ್ಯದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ನಡಿ ಪ್ರತಿಭಟನೆ ನಡೆಸಿದವರು ಹಗರಣಗಳ ಆರೋಪ ಎದುರಿಸುತ್ತಿರುವ ಸರ್ಕಾರವನ್ನು ಬೆಂಬಲಿಸುವ ಮೂಲಕ ಸಂವಿಧಾನ ಮತ್ತು ಸಂವಿಧಾನದ ಪಿತಾಮಹಾನಿಗೆ ಅಪಮಾನ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಶೋಷಿತರಿಗೆ ಸರ್ಕಾರದಿಂದ ಅನ್ಯಾಯವಾಗುತ್ತಿದ್ದರೂ ಧ್ವನಿ ಎತ್ತದವರು ಇದೀಗ ಅರೆಬೆತ್ತಲೆ ಪ್ರತಿಭಟನೆ ನಡೆಸಿರುವುದನ್ನು ಗಮನಿಸಿದರೆ ಇವರಿಗೆ ಪರಿಶಿಷ್ಟರ ಹಿತಕಾಯುವ ಆಸಕ್ತಿ ಇದೆಯೇ ಅಥವಾ ಸರ್ಕಾರವನ್ನು ರಕ್ಷಣೆ ಮಾಡುವ ಕುತಂತ್ರವಿದೆಯೇ ಎನ್ನುವ ಸಂಶಯ ಮೂಡುತ್ತದೆ ಎಂದು ಪಿ.ಎಂ.ರವಿ ಆರೋಪಿಸಿದ್ದಾರೆ. ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಜಾರಿಯಲ್ಲಿದ್ದರೂ ಇದನ್ನು ದಿಕ್ಕರಿಸಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಸರಕಾರ ಎಂಬುವುದನ್ನು ದಲಿತ ಸಂಘಟನೆಗಳು ಮನವರಿಕೆ ಮಾಡಿಕೊಳ್ಳಬೇಕು. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರವಷ್ಟೇ ಡಾ.ಅಂಬೇಡ್ಕರ್ ಅವರಿಗೆ ಸಕಲ ಗೌರವ ಸಿಕ್ಕಿದೆ. ಶೋಷಿತ ಪರಿಶಿಷ್ಟ ಸಮುದಾಯದವರನ್ನು ಗುರುತಿಸಿ ಉನ್ನತ ಸ್ಥಾನಮಾನವನ್ನು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕಾಂಗ್ರೆಸ್ ನ ದುರಾಡಳಿತವನ್ನು ಸಹಿಸದೆ ಡಾ.ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಿದರು. ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಎರಡು ಬಾರಿ ಕಾಂಗ್ರೆಸ್ ಪಕ್ಷವೇ ಸೋಲಿಸಿತು. ಅಂತಿಮ ಸಂಸ್ಕಾರದ ಸಂದರ್ಭವೂ ಅವಮಾನಿಸಲಾಯಿತು ಎಂದು ಆರೋಪಿಸಿರುವ ಪಿ.ಎಂ.ರವಿ, ಪರಿಶಿಷ್ಟ ಸಮುದಾಯದವರು ಹಾಗೂ ಸಂಘಟನೆಗಳು ಮೊದಲು ಈ ಸತ್ಯಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಶೋಷಿತರ ಏಳಿಗೆಗಾಗಿ ಸಂಘಟನೆಗಳು ಹೋರಾಟಗಳನ್ನು ರೂಪಿಸಬೇಕೆ ಹೊರತು ಭ್ರಷ್ಟ ಸರ್ಕಾರದ ಅಂಗಸಂಸ್ಥೆಯಂತೆ ವರ್ತಿಸಬಾರದು ಎಂದು ಒತ್ತಾಯಿಸಿದ್ದಾರೆ.