ಮಡಿಕೇರಿ ನ.8 NEWS DESK : ಪತ್ರಿಕಾ ಕ್ಷೇತ್ರದಲ್ಲಿನ ಸೇವೆ ಎನ್ನುವುದು ಸಾಮಾಜಿಕ ಜವಾಬ್ದಾರಿಯ ಕೆಲಸವೇ ಆಗಿದೆಯೆಂದು ಮೈಸೂರು ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಸಪ್ನಾ ಎಂ.ಎಸ್. ಅಭಿಪ್ರಾಯಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ‘ಕೊಡಗು ಪತ್ರಿಕಾ ಭವನದ 23ನೇ ವಾರ್ಷಿಕೋತ್ಸವ’ವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ, ಮುಖ್ಯ ಭಾಷಣ ಮಾಡಿದ ಅವರು, ವಕೀಲ, ವೈದ್ಯ ಸಮೂಹದ ಸೇವೆಯಂತೆಯೆ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವವರು ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತಾರೆಂದು ದೃಢವಾಗಿ ನುಡಿದರು. ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳೊಂದಿಗೆ ತಾಂತ್ರಿಕವಾಗಿಯೂ ಸಾಕಷ್ಟು ಬದಲಾವಣೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಈ ಬದಲಾವಣೆಗಳಿಗೆ ಪತ್ರಿಕಾ ಕ್ಷೇತ್ರದಲ್ಲಿರುವವರು ಹೊಂದಿಕೊಳ್ಳುವ ಪ್ರಯತ್ನಗಳಿಗೆ ಮುಂದಾಗುವುದು ಅತ್ಯವಶ್ಯವೆಂದು ತಿಳಿಸಿದ ಅವರು, ತಾಂತ್ರಿಕ ಬದಲಾವಣೆಯ ಸೂಕ್ಷ್ಮ ಹಂತದಲ್ಲಿರುವ ಪತ್ರಿಕಾ ಕ್ಷೇತ್ರವಿಂದು ಕವಲು ದಾರಿಯಲ್ಲಿದೆಯೆಂದು ಅಬಿಪ್ರಾಯಿಸಿದರು. ಪತ್ರಿಕಾ ಕ್ಷೇತ್ರದಲ್ಲಿರುವ ಪತ್ರಕರ್ತನಾದವನು ವಿವಿಧ ವಿಚಾರ ವಿಷಯಗಳತ್ತ ತಮ್ಮ ಅರಿವಿನ ಪರಿಧಿಯನ್ನು ಯಾವತ್ತೂ ವಿಸ್ತರಿಸಿಕೊಂಡಿರಬೇಕು ಮತ್ತು ತಮ್ಮ ಕ್ಷೇತ್ರಕ್ಕೆ ಪೂರಕವಾದ ತಾಂತ್ರಿಕವಾದ ವಿವಿಧ ತಾಂತ್ರಿಕ ಕೌಶಲ್ಯತೆಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅತ್ಯಂತ ಪ್ರಮುಖವಾಗಿ ನಾವು ಸಮಾಜವನ್ನು ನೋಡುವಂತೆಯೇ ಸಮಾಜವು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಎನ್ನುವ ಅರಿವನ್ನು ಹೊಂದಿರಬೇಕೆಂದು ತಿಳಿಸಿದರು. ಬದಲಾಗುತ್ತಿರುವ ಪರಿಸ್ಥಿತಿಗಳ ನಡುವೆ ಹೊಸ ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಕಿವಿ ಮಾತುಗಳನ್ನಾಡಿದ ಅವರು, ಪತ್ರಿಕೋದ್ಯಮ ಶಿಕ್ಷಣವೆನ್ನುವುದು ಕೇವಲ ಪದವಿ ಗಳಿಕೆಗೆ ಸೀಮಿತವಾಗಕೂಡದು. ಅದನ್ನು ಮೀರಿ ಹೊಸ ವಿಚಾರಗಳತ್ತ ನಮಮ್ಮ ಚಿಂತನೆ ಹರಿಸಬೇಕೆಂದು ತಿಳಿಸಿದರು.
ಕಾನೂನಿನ ಅರಿವಿರಲಿ :: ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುವ ಬಹುತೇಕರು ಕಾನೂನಿನ ಅರಿವನ್ನು ಹೊಂದಿಲ್ಲವೆಂದು ಅಭಿಪ್ರಾಯಿಸಿ, ತಾನು ಏನನ್ನು ವರದಿ ಮಾಡಬಹುದು, ಬರೆಯಬಹುದು ಎನ್ನುವ ಸ್ಪಷ್ಟ ಚಿಂತನೆಯ ಅರಿವನ್ನು ಕಾನೂನಿನ ಜ್ಞಾನದೊಂದಿಗೆ ಪಡೆದುಕೊಳ್ಳುವುದು ಅವಶ್ಯ. ಮಾಹಿತಿಗಳನ್ನು ಪಡೆಯಲು ಲಭ್ಯವಿರುವ ‘ಮಾಹಿತಿ ಹಕ್ಕು ಕಾಯ್ದೆ’ಯನ್ನು ಪತ್ರಕರ್ತರು ಸ್ಪಷ್ಟವಾದ ಮಾಹಿತಿ, ಅಂಕಿಅಂಶಗಳನ್ನು ತಮ್ಮ ಬರವಣಿಗೆಯಲ್ಲಿ ತರುವುದಕ್ಕೆ ಪೂರಕವಾದ ‘ಅಸ್ತ್ರ’ವನ್ನಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ರಾಜಕೀಯ-ಅಪರಾಧಗಳ ಸುತ್ತ ಗಿರಕಿ :: ಪ್ರಸ್ತುತ ಮಾಧ್ಯಮ ಕ್ಷೇತ್ರವೆನ್ನುವುದು ರಾಜಕೀಯ ಮತ್ತು ಅಪರಾಧಗಳ ನಡುವೆ ಗಿರಕಿ ಹೊಡೆಯುತ್ತಿದೆ. ಇವುಗಳನ್ನು ಮೀರಿ ಮಹಿಳೆಯರು, ಆರೋಗ್ಯ, ಗ್ರಾಮೀಣರು, ಗಿರಿಜನರ ವಿಚಾರಗಳತ್ತ ದೃಷ್ಟಿ ಹರಿಸಬೇಕು. ಅಲ್ಲಿನ ನೈಜ ವಿಚಾರಗಳನ್ನು ಬೆಳಕಿಗೆ ತರುವ ಪ್ರಯತ್ನಗಳಿಗೆ ಮುಂದಾಗಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸುಳ್ಯದ ಸಮಾಜ ಸೇವಕರು ಹಾಗೂ ಹಿರಿಯ ಪತ್ರಕರ್ತರಾದ ಎಂ.ಬಿ. ಸದಾಶಿವ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಉಳಿಸುವ ನಿಟ್ಟಿನ ಕಾರ್ಯಕ್ಕಾಗಿಯೇ ‘ಪತ್ರಿಕಾ ಕ್ಷೇತ್ರ’ವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಗಣಿಸಲಾಗಿದೆ. ಹೀಗಿದ್ದೂ ವಿಶ್ವ ಮಟ್ಟದ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ ಅತೀ ಕೆಳಗಿನ ಸ್ಥಾನದಲ್ಲಿದೆಯೆಂದು ವಿಷಾದಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಜನ ಶಕ್ತಿಯನ್ನು ಒಗ್ಗೂಡಿಸುವ ಮಹತ್ತರವಾದ ಜವಾಬ್ದಾರಿ ಪತ್ರಿಕೆಗಳ ಮೇಲಿತ್ತು. ಪ್ರಸ್ತುತ ಪತ್ರಿಕಾ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿದೆ. ಉತ್ತಮ ಅಭಿರುಚಿಗಳನ್ನು, ಮೌಲ್ಯಗಳನ್ನು ಜನರಲ್ಲಿ ಮುಡಿಸುವ ಕೆಲಸ ಪತ್ರಿಕೆಗಳ ಮೂಲಕ ನಡೆಯುವಂತಾಗಲೆಂದು ಹಾರೈಸಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವ ಜಿಲ್ಲೆಯ ಎಲ್ಲರಿಗು ಅನುಕೂಲರವಾಗಲಿ ಎನ್ನುವ ಚಿಂತನೆಗಳಡಿ ವಿವಿಧೋದ್ದೇಶಗಳ ಪತ್ರಿಕಾ ಭವನವನ್ನು ನಿರ್ಮಿಸಲಾಗಿದೆ. ಭವನವನ್ನು ನಿರ್ವಹಿಸುವ ಪತ್ರಿಕಾ ಭವನ ಟ್ರಸ್ಟ್ ವಿದ್ಯಾನಿಧಿಯನ್ನು ಸ್ಥಾಪಿಸಿ ಮಕ್ಕಳ ಶಿಕ್ಷಣಕ್ಕೆ ನೆರವನ್ನು ನೀಡುತ್ತಾ ಬರುತ್ತಿದೆಯಲ್ಲದೆ, ಸಮಾಜದ ಹಿತಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ. ಮುರಳೀಧರ್ ಅವರು, ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್, ಪತ್ರಿಕಾ ಭವನನವನು ಸ್ಥಾಪಿಸಿ 23 ವರ್ಷಗಳು ಕಳೆದಿದ್ದು, ಬೆಳ್ಳಿ ಮಹೋತ್ಸವದ ಹೊಸ್ತಿಲಲ್ಲಿ ಇರುವುದಾಗಿ ತಿಳಿಸಿ, ಟ್ರಸ್ಟ್ ಮೂಲಕ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ಸನ್ಮಾನ- ಇದೇ ಸಂದರ್ಭ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಪ್ರೊ.ಸಪ್ನಾ ಎಂ.ಎಸ್. ಮತ್ತು ಎಂ.ಬಿ. ಸದಾಶಿವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಹುಮಾನ ವಿತರಣೆ :: ಪತ್ರಿಕಾ ಭವನ ಟ್ರಸ್ಟ್ ವಾರ್ಷಿಕೋತ್ಸವ ಹಿನ್ನೆಲೆ ಆಯೋಜಿತ ಒಳಾಂಗಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಖ್ಯಾತ ಗಾಯಕ ಲಿಯಾಕತ್ ಅಲಿ ಪ್ರಾರ್ಥಿಸಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿದರೆ, ಟ್ರಸ್ಟಿ ಅನಿಲ್ ಎಚ್.ಟಿ. ಮತ್ತು ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್‍ನ ಖಜಾಂಚಿ ಕೆ. ತಿಮ್ಮಪ್ಪ ಮತ್ತು ಟಸ್ಟಿ ಮಧೋಷ್ ಪೂವಯ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಟ್ರಸ್ಟಿ ಶ್ರೀಧರ್ ಹೂವಲ್ಲಿ ವಂದಿಸಿದರು.