ಕುಶಾಲನಗರ ನ.9 NEWS DESK : ಕುಶಾಲನಗರ ಮಹಾತ್ಮಾ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ ಕ್ಯಾಂಪಸ್ ಚಾಲೆಂಜ್ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು. ಮೂರು ದಿನಗಳ ಕಾಲ ಕಾಲೇಜು ಆವರಣದ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪದವಿ ಕಾಲೇಜಿನ ವಿವಿಧ ವಿಭಾಗಗಳ ತಂಡಗಳು ಪಾಲ್ಗೊಂಡಿದ್ದವು. ವಾಲಿಬಾಲ್, ತ್ರೋಬಾಲ್, ಫುಟ್ಬಾಲ್ ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜರಗಿದವು. ವಿವಿಧ ಆಟೋ ಸ್ಪರ್ಧೆಗಳಲ್ಲಿ ಚಾಂಪಿಯನ್ ಟ್ರೋಫಿಯನ್ನು ಅಂತಿಮ ಬಿಕಾಂ ವಿದ್ಯಾರ್ಥಿಗಳ ತಂಡ ಗಳಿಸಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಪತ್ರಕರ್ತೆ ವನಿತಾ ಚಂದ್ರಮೋಹನ್, ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಗಳಿಕೆ ಸಾಧ್ಯ. ಹೆಣ್ಣು ಮಕ್ಕಳು ತಮ್ಮ ದೇಹದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆಹಾರ ಪದ್ಧತಿ ಬದಲಾವಣೆಯಿಂದ ರೋಗ ರುಜಿನಗಳ ಬಾಧೆಗೆ ಒಳಗಾಗಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು. ಶೈಕ್ಷಣಿಕ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು ಬದ್ಧವಾಗಿ ತಮ್ಮ ಪೋಷಕರು ಮತ್ತು ಗುರುಗಳಿಗೆ ವಿಧೇಯರಾಗುವುದರೊಂದಿಗೆ ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು. ವಿವೇಕಾನಂದ ಕಾಲೇಜು ಎಜುಕೇಶನ್ ಟ್ರಸ್ಟ್ ಖಜಾಂಚಿ ಎಂ.ಎನ್.ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ವತಿಯಿಂದ ಮುಖ್ಯ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಚಂದ್ರಮೋಹನ್, ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಟಿ ಎ ಲಿಖಿತ, ವಿವೇಕಾನಂದ ಪಿಯು ಕಾಲೇಜು ಪ್ರಿನ್ಸಿಪಲ್ ಕ್ಲಾರಾ ರೇಷ್ಮಾ, ಸಂಸ್ಥೆಯ ಆಡಳಿತ ಅಧಿಕಾರಿ ಮಹೇಶ್ ಅಮೀನ್, ದೈಹಿಕ ಶಿಕ್ಷಕರಾದ ದಿನೇಶ್ ಕುಮಾರ್, ಮಂಜೇಶ್ ಹಾಗೂ ಉಪನ್ಯಾಸಕರು ಇದ್ದರು.