ಮಡಿಕೇರಿ ನ.11 NEWS DESK : ಸಹಸ್ರಾರು ಕಂಠಗಳಿಂದ ಕನ್ನಡಾಭಿಮಾನ ಎನ್ನುವುದು ಹಾಡಾಗಿ ಹೊರ ಹೊಮ್ಮಿ, ಕುಶಾಲನಗರದ ನಗರದ ದಶ ದಿಕ್ಕುಗಳಲ್ಲಿ ಪಸರಿಸುವ ಮೂಲಕ “ಸಹಸ್ರ ಕಂಠ ಗಾಯನ” ಕನ್ನಡ ತಾಯಿ ಶ್ರೀಭುವನೇಶ್ವರಿಯ ಪ್ರಭಾವಳಿಯನ್ನು ಮತ್ತಷ್ಟು ಬೆಳಗುವಲ್ಲಿ ಯಶಸ್ವಿಯಾಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತು,್ತ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ಮಧ್ಯಾಹ್ನ ನಗರದ ಶ್ರೀ ಗಣಪತಿ ದೇಗುಲದ ಬಳಿಯ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ನೆರೆದ ಸಹಸ್ರಾರು ವಿದ್ಯಾರ್ತಿಗಳು, ಕನ್ನಡಾಭಿಮಾನಿಗಳು ಏಕ ಕಂಠದಿಂದ, ಏಕಕಾಲದಲ್ಲಿ ಕನ್ನಡ ನಾಡಗೀತೆ, ರೈತ ಗೀತೆ ಮತ್ತು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತ ಗಾಯನವನ್ನು ನಡೆಸಿಕೊಟ್ಟರು. ಸಹಸ್ರಾರು ಮಂದಿಯಿಂದ ಮೊಳಗಿದ ಕನ್ನಡ ನಾಡಗೀತೆ ಅಪರೂಪದ ರೋಮಾಂಚಕ ಅನುಭವವನ್ನು ಪಾಲ್ಗೊಂಡವರಲ್ಲಿ ಮೂಡಿಸಿತು.
ಕನ್ನಡ ಜ್ಯೋತಿ ರಥದ ಮೆರವಣಿಗೆ- ಸಹಸ್ರ ಕಂಠ ಗಾಯನಕ್ಕೂ ಮುನ್ನ ಸಿದ್ದಾಪುರ ಕಡೆಯಿಂದ ಆಗಮಿಸಿದ ‘ಕನ್ನಡ ಜ್ಯೋತಿ ರಥ’ಕ್ಕೆ ಬೈಚನಹಳ್ಳಿಯ ಮಾರಮ್ಮ ದೇಗುಲದ ಬಳಿ ಕಸಾಪವನ್ನು ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳು ಭವ್ಯ ಸ್ವಾಗತವನ್ನು ನೀಡಿದವು. ಬಳಿಕ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವಿವಿಧ ಶಾಲೆಗಳ ಸಹಸ್ರಾರು ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ, ಕನ್ನಡ ಧ್ವಜದೊಂದಿಗೆ, ಕನ್ನಡದ ಹಿರಿಮೆಯನ್ನು ನಾಡಿಗೆ ಸಾರಿದ ಮಹಾಮಹಿಮರ ಭಾವ ಚಿತ್ರಗಳನ್ನು ಪ್ರದರ್ಶಿಸುತ್ತಾ ಶ್ರೀ ಗಣಪತಿ ದೇಗುಲದ ವರೆಗೆ ಭವ್ಯ ಮೆರವಣಿಗೆಯನ್ನು ನಡೆಸಿದರು.