ಕುಶಾಲನಗರ, ನ.12 NEWS DESK : ಕೊಡಗು ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕಲೋತ್ಸವ: 2024 ವು ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಮಕ್ಕಳು ಪ್ರದರ್ಶಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸಳೆಯಿತು. ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಮಾತನಾಡಿ, ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಸ್ಪರ್ಧೆಯು ಒಂದು ವಿನೂತನ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಮಕ್ಕಳ ಇಂತಹ ಕಲಾ ಪ್ರತಿಭಾ ಸ್ಪರ್ಧೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ವಿದ್ಯಾರ್ಥಿಗಳು ಇಂತಹ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸುವ ಮೂಲಕ ಉತ್ತಮ ಕಲಾ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ಮತ್ತು ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಪೋಷಕರು ಶಿಕ್ಷಕರೊಡನೆ ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ವ್ಯಕ್ತಿತ್ವ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಿಇಓ ಭಾಗ್ಯಮ್ಮ ಹೇಳಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲ ಕೆ.ಎನ್.ಶಿವಕುಮಾರ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆ ಬೆಳಕಿಗೆ ತರುವ ಪ್ರಯತ್ನಗಳಿಗೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ. ಪ್ರತಿಭಾ ಕಾರಂಜಿ ಮೂಲಕ ಮಕ್ಕಳು ಉತ್ತಮ ಶಿಕ್ಷಣ ಹಾಗೂ ಪ್ರತಿಭೆಯೊಂದಿಗೆ ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಅವಕಾಶವಾಗಿದೆ ಎಂದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಈ ಸ್ಪರ್ಧೆಯು ಮಕ್ಕಳ ಕಲಾಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು, ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಹೇಳಿದರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್ ಮಾತನಾಡಿ, ಮಕ್ಕಳ ಪ್ರತಿಭೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು. ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹೇಮಂತ್, ಪ್ರತಿಭಾ ಕಾರಂಜಿ ಸ್ಪರ್ಧೆಯ ಮಹತ್ವ ಕುರಿತು ಮಾಹಿತಿ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತ ಡಯಾಸ್ ಅಧ್ಯಕ್ಷತೆ ವಹಿಸಿದ್ದರು. ಬಿ ಆರ್ ಸಿ ಎಂ.ವಿ.ಮಂಜೇಶ್, ಕೂಡಿಗೆ ಡಯಟ್ ನ ಉಪನ್ಯಾಸಕ ಎಂ.ಕೃಷ್ಣಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಭಾರತ್ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಕೆ.ಪಿ.ರಾಜು, ಸ್ಪರ್ಧಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಬಿ ಆರ್ ಪಿ ಎಸ್.ಎಸ್.ಶಿವಕುಮಾರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಜಿ.ಪಿ.ಕವಿತ, ನಿರ್ದೇಶಕಿ ಎಚ್.ಎಸ್.ಉಮಾದೇವಿ,
ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಯಶವಂತ್, ಟಿ.ಎಸ್.ಶಶಿಕುಮಾರ್, ಜಿಲ್ಲಾ ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ
ಉಪಾಧ್ಯಕ್ಷ .ಪಿ.ಕರುಂಬಯ್ಯ, ಸಿ.ಆರ್.ಪಿ.ಕೆ.ಶಾಂತಕುಮಾರ್, ಸಿಸ್ಟರ್ ಲೀನಾ ಫರ್ನಾಂಡೀಸ್, ತಾಲ್ಲೂಕಿನ ಸಿ ಆರ್ ಪಿ ಗಳು, ಮಾರ್ಗದರ್ಶಿ ಶಿಕ್ಷಕರು, ಶಾಲಾ ಶಿಕ್ಷಕರು, ಪೋಷಕರು ಇತರರು ಇದ್ದರು. ಛದ್ಮವೇಷ ಸ್ಪರ್ಧೆಯಲ್ಲಿ ಮಕ್ಕಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ನಮೂನೆಯ ವೇಷಧಾರಿಗಳಾಗಿ ಗಮನ ಸೆಳೆದರು.
ವಿವಿಧ ಸ್ಪರ್ಧೆಗಳು: ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವೈಯಕ್ತಿಕ ವಿಭಾಗದಲ್ಲಿ ಭಾಷಣ, ಧಾರ್ಮಿಕ ಪಠಣ, ಪದ್ಯಗಳು (ಸಂಸ್ಕೃತ ಮತ್ತು ಅರೇಬಿಕ್) ಯೋಗಾಸನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಗೀತೆಗಳು, ಲಘು ಸಂಗೀತ, ಭರತನಾಟ್ಯ, ಕ್ಲೇ ಮಾಡೆಲಿಂಗ್, ಮಿಮಿಕ್ರಿ, ಪ್ರಬಂಧ ಬರಹ, ಚರ್ಚಾಸ್ಪರ್ಧೆ, ರಂಗೋಲಿ, ಗಾಜಲ್ಸ್ , ಪ್ರಬಂಧ ಬರಹ, ಚರ್ಚಾಸ್ಪರ್ಧೆ, ರಂಗೋಲಿ, ಕ್ಲೇ ಮಾಡಲಿಂಗ್, ರಂಗೋಲಿ, ಛದ್ಮವೇಷ, ಡ್ರಾಯಿಂಗ್, ಕಥೆ ಹೇಳುವುದು ಇತ್ಯಾದಿ ಸ್ಪರ್ಧೆಗಳು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಜಾನಪದ ನೃತ್ಯ, ಕೋಲಾಟ, ರಸಪ್ರಶ್ನೆ, ಮುಂತಾದ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಮಕ್ಕಳ ಪ್ರತಿಭೆಗೆ ಪೋಷಕರು ಮತ್ತು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.