ಮಡಿಕೇರಿ ನ.14 NEWS DESK : ಪೊನ್ನಂಪೇಟೆಯ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ಅವಿನ್ಯಂ” ವಿದ್ಯಾರ್ಥಿ ಒಕ್ಕೂಟದ 2024-25ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಂಭ್ರಮದಿಂದ ನಡೆಯಿತು. ಬೆಂಗಳೂರು ಹೆಚ್‍ಪಿ ಕಂಪನಿಯ ಹಿರಿಯ ತಂತ್ರಜ್ಞ ಡಾ. ಎಂ.ಆರ್.ಚಂಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಅದರಿಂದ ತಾಂತ್ರಿಕ ಸಂಸ್ಥೆಗಳು ದೈನಂದಿನ ಚಟುವಟಿಕೆಗಳನ್ನು ಸುಧಾರಿಸುತ್ತಿರುವ ಕುರಿತು ಸಂದೇಶ ನೀಡಿದರು. “ಸ್ಥಿರ ಭವಿಷ್ಯಕ್ಕಾಗಿ ಬದಲಾವಣೆಯ ಒಕ್ಕೂಟ ಮತ್ತು ವಿಕೇಂದ್ರೀಕೃತ ವಿಧಾನಗಳು” ಎಂಬ ವಿಷಯದ ಕುರಿತು ತಾಂತ್ರಿಕ ಉಪನ್ಯಾಸ ನೀಡಿ, ಮುಂದಿನ ಪೀಳಿಗೆಗೆ ಬದಲಾವಣೆಯ ಅವಶ್ಯಕತೆಯ ಬಗ್ಗೆ ವಿವರಿಸಿದರು. ಪ್ರಾಂಶುಪಾಲರಾದ ಡಾ.ಎಂ.ಬಸವರಾಜ್ ಮಾತನಾಡಿ, ವಿದ್ಯಾರ್ಥಿ ಒಕ್ಕೂಟವು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹಾರೈಸಿದರು. ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಕೇಶ್ ಪೂವಯ್ಯ “ಸಂವಿದ್-2.0” ವಾರ್ಷಿಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ಹೇಗೆ ನಮ್ಮ ಸಮಾಜದಲ್ಲಿ ಬದಲಾವಣೆಯನ್ನು ತರುತ್ತಿದೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ನೂತನ ಅಧ್ಯಕ್ಷ ಎನ್.ಸಿ.ಕುಮಾರ್ ಚಿಣ್ಣಪ್ಪ ಹಾಜರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮಿ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ಬಿ.ಬಿ.ರಾಮಕೃಷ್ಣ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕೆ.ಪಿ.ಭುವನ್ ಮತ್ತು ಶ್ರೀಲಕ್ಷ್ಮಿ ನಿರೂಪಿಸಿದರು. ಸಮಾರಂಭದ ಸಂಯೋಜಕರಾದ ಸಹ ಪ್ರಾಧ್ಯಾಪಕಿ ಎಂ.ಯು.ಪೊನ್ನಮ್ಮ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಡಿಲೈಟ್ ಟೆಕ್ನಾಲಜೀಸ್, ಬೆಂಗಳೂರು ಸಂಸ್ಥೆ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿತ್ತು.