ಮಡಿಕೇರಿ ನ.20 NEWS DESK : ಪುಸ್ತಕಗಳ ಅಧ್ಯಯನದಿಂದ ಜ್ಞಾನ ವಿಸ್ತಾರ ಹೆಚ್ಚಾಗಲಿದೆ. ಆದ್ದರಿಂದ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ, ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತಿಹಾಸ ತಿಳಿಯಬೇಕಿದ್ದಲ್ಲಿ ಪುಸ್ತಕಗಳ ಅಧ್ಯಯನ ಅತ್ಯಗತ್ಯ. ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ, ವಿಜ್ಞಾನ, ತಂತ್ರಜ್ಞಾನ, ಆಧುನಿಕತೆ ಹೀಗೆ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಳ್ಳುವಂತಾಗಲು ಪುಸ್ತಕಗಳ ಅಧ್ಯಯನ ಅತ್ಯಗತ್ಯ ಎಂದು ಹೇಳಿದರು. ಯುವ ಜನರಲ್ಲಿ ಓದಿನ ಬಗ್ಗೆ ಹಂಬಲ ಇರಬೇಕು. ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಲೈಬ್ರರಿ ಸಹ ಇದ್ದು, ಇವುಗಳನ್ನು ಬಳಸಿಕೊಳ್ಳಬೇಕು. ಪುಸ್ತಕ ಅಧ್ಯಯನ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಆರ್.ಐಶ್ವರ್ಯ ಸಲಹೆ ನೀಡಿದರು. ಗಂಧದ ಮರದ ಮಹತ್ವ ಗೊತ್ತಿದ್ದಲ್ಲಿ ಯಾವುದಕ್ಕೆ ಬಳಸಬೇಕು ಎಂದು ತಿಳಿಯುತ್ತದೆ. ಇಲ್ಲದಿದ್ದರೆ ಕಟ್ಟಿಗೆಗೆ ಬಳಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಂದರ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರು 60 ರಿಂದ 70 ಸಾವಿರ ಪುಸ್ತಕಗಳನ್ನು ಅಧ್ಯಯನ ಮಾಡಿದ್ದಾರೆ. ಅವರ ಜ್ಞಾನ ಭಂಡಾರವೇ ಒಂದು ರೀತಿ ಗ್ರಂಥಾಲಯ, ರಾಷ್ಟ್ರಕವಿ ಕುವೆಂಪು, ಅಮೆರಿಕಾದ ಬೂಕರ್ ವಾಷಿಂಗ್‍ಟನ್, ಡಿ.ವಿ.ಗುಂಡಪ್ಪ, ಮಹಾಭಾರತದ ಪಾತ್ರಗಳು, ಭಗವದ್ಗೀತೆ, ಬೈಬಲ್, ಕುರಾನ್, ಹೀಗೆ ಪ್ರತಿಯೊಂದನ್ನು ಅಧ್ಯಯನ ಮಾಡುವುದರಿಂದ ಪ್ರಬುದ್ಧತೆ ಹೆಚ್ಚಾಗಲಿದೆ ಎಂದು ವಿವರಿಸಿದರು. ಸಾಹಿತಿ ಉ.ರಾ.ನಾಗೇಶ್ ಅವರು ಮಾತನಾಡಿ ಪುಸ್ತಕಗಳು ಜ್ಞಾನವನ್ನು ವೃದ್ಧಿಸಲು ಸಹಕಾರಿ. ಭಾಷೆ, ಬರಹ, ಬಣ್ಣ, ಭಾವನೆ ಇವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಾತಿನ, ನುಡಿಯ ರೂಪದಲ್ಲಿ ಬರಹದಲ್ಲಿಯೂ ಕೂಡ ಕಾಣಬಹುದಾಗಿದೆ ಎಂದರು. ಪುಸ್ತಕಗಳು ಇಲ್ಲದಿದ್ದರೆ ಇತಿಹಾಸ ಹಾಗೂ ವಿಜ್ಞಾನದ ಮಹತ್ವವನ್ನು ತಿಳಿಯುವುದು ಕಷ್ಟಸಾಧ್ಯವಾಗುತ್ತಿತ್ತು. ಆದ್ದರಿಂದ ಪುಸ್ತಕಗಳು ಭವಿಷ್ಯದ ಆಧಾರ ಸ್ತಂಭಗಳು ಎಂದು ಉ.ರಾ.ನಾಗೇಶ್ ಬಣ್ಣಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ ಅವರು ಮಾತನಾಡಿ ಶಾಲೆಗಳಲ್ಲಿ ಗ್ರಂಥಾಲಯ ಅಭಿವೃದ್ಧಿಗೆ ಸರ್ಕಾರದಿಂದ ಪ್ರೋತ್ಸಾಹಿಸಲಾಗುತ್ತಿದೆ. ಪಿಎಂಶ್ರೀ ಮೂರು ಶಾಲೆಗಳಿಗೆ ಡಿಜಿಟಲ್ ಗ್ರಂಥಾಲಯ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕ ಗ್ರಂಥಾಲಯ, ಗ್ರಾಮ ಪಂಚಾಯಿತಿ ಗ್ರಂಥಾಲಯ ಇವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ರೇಣುಶ್ರೀ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಪ್ರಕಾಶ್ ಎಂ.ಎನ್., ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಸುರೇಖಾ, ಕೋರಂಗಾಲ ಅಲೆಮಾರಿ ಗ್ರಂಥಾಲಯದ ಮೇಲ್ವಿಚಾರಕಿ ನಾಗವೇಣಿ, ಸಹಾಯಕ ಗ್ರಂಥಪಾಲಕ ವಿಜಯ್ ನಾಗ್ ಇತರರು ಇದ್ದರು.