ಮಡಿಕೇರಿ ನ.20 NEWS DESK : ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಹೇಳುತ್ತಾರೆ. ಆದರೆ ಸಹಕಾರ ಕ್ಷೇತ್ರ ಸೇರಿದಂತೆ ಪ್ರತಿಯೊಂದು ರಂಗದಲ್ಲಿಯೂ ಸಹ ಜಾತಿ, ಸಮಾಜ, ರಾಜಕಾರಣ ಇದ್ದೇ ಇದೆ. ಇದರ ನಡುವೆಯೂ ಹಿಂದಿನವರು ಕಟ್ಟಿಕೊಂಡು ಬಂದಿರುವ ಸಹಕಾರ ಕ್ಷೇತ್ರವನ್ನು ಬಲಪಡಿಸುವುದು ಅತ್ಯವಶ್ಯಕ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ ಪ್ರತಿಪಾದಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆಯಿಂದ ಕರ್ನಾಟಕ ಇನ್ಸ್ಸಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿ 71 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಪ್ರಾಯೋಜಿತ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ಕ್ಷೇತ್ರದಲ್ಲಿ ಯಾರೂ ಸಹ ಮೂಗು ತೂರಿಸಬಾರದು ಎಂದು ಹೇಳುತ್ತಾರೆ. ಆದರೆ ಎಲ್ಲಾ ರಂಗದಲ್ಲಿಯೂ ಒಂದಲ್ಲ ಒಂದು ರೀತಿಯ ರಾಜಕಾರಣ ಇರುತ್ತದೆ. ಇದರಿಂದ ಯಾವುದೇ ರಂಗ ಹೊರತಾಗಿಲ್ಲ ಎಂದು ಮನುಮುತ್ತಪ್ಪ ನುಡಿದರು. ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ರಾಜ್ಯದಲ್ಲಿ ಬಲಿಷ್ಠವಾಗಿದೆ. ಹಲವು ಸಹಕಾರ ಸಂಘಗಳನ್ನು ಕಟ್ಟುವಲ್ಲಿ ಹಿರಿಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಮೀನ-ಮೇಷ ಎಣಿಸುತ್ತಾರೆ ಎಂದು ಮನುಮುತ್ತಪ್ಪ ಬೇಸರ ವ್ಯಕ್ತಪಡಿಸಿದರು. ಸಹಕಾರ ಕ್ಷೇತ್ರದಲ್ಲಿ ಹಿರಿಯರು ಫಲಾಪೇಕ್ಷೆ ಇಲ್ಲದೆ ಸಹಕಾರ ಸಂಘಗಳನ್ನು ಉಳಿಸಿ-ಬೆಳೆಸಿಕೊಂಡು ಬಂದಿರುವುದಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವವರಲ್ಲಿ ಯಾವುದೇ ರೀತಿಯ ಸ್ವಾರ್ಥ ಇರಬಾರದು. ಸ್ವಾರ್ಥ ಇದ್ದಲ್ಲಿ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದರು. ಸಹಕಾರ ಯೂನಿಯನ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸಹಕಾರದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಸಹಕಾರಿಗಳನ್ನು ಗುರುತಿಸಿ ಗೌರವಿಸಲು ಮುಂದಾಗಲಾಗಿದೆ ಎಂದು ಹೇಳಿದರು. ‘ರಾಷ್ಟ್ರವು ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು, ‘ವಿಕಸಿತ ಭಾರತ’ ಪರಿಕಲ್ಪನೆಯೊಂದಿಗೆ ಮಾಹಿತಿ, ಕೈಗಾರಿಕೆ, ವಿದ್ಯುನ್ಮಾನ ಒಳಗೊಂಡಂತೆ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡು ನಾಲ್ಕನೇ ಅಭಿವೃದ್ಧಿ ರಾಷ್ಟ್ರದತ್ತ ಮುನ್ನಡೆಯುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮನುಮುತ್ತಪ್ಪ ತಿಳಿಸಿದರು.’ ಅಭಿವೃದ್ಧಿಯಲ್ಲಿ ಇಡೀ ವಿಶ್ವದಲ್ಲಿ ಭಾರತವು 11 ನೇ ಸ್ಥಾನದಲ್ಲಿದ್ದು, 4ನೇ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಪ್ರಧಾನಮಂತ್ರಿ ಅವರು ಶ್ರಮಿಸುತ್ತಿದ್ದಾರೆ. 2047 ರ ವೇಳೆಗೆ ಇಡೀ ವಿಶ್ವದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮುನ್ನಡೆಯುವಂತಾಗಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಆಗಬೇಕು ಎಂಬ ಉದ್ದೇಶದಿಂದ ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳನ್ನು ಬಲಪಡಿಸುವಲ್ಲಿ ಮುಂದಾಗಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹೇಳಿದರು. ಹಿರಿಯ ಸಹಕಾರಿಗಳು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳನ್ನು ಹಿರಿಯರು ಉಳಿಸಿ, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಸಹಕಾರ ಸಂಘಗಳನ್ನು ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಸಾಧಿಸುವತ್ತ ಗಮನಹರಿಸಬೇಕು ಎಂದರು. ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಸೇರಿದಂತೆ ಕಲೆ, ಸಾಹಿತ್ಯ, ಜಾನಪದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಇಲ್ಲಿನ ಕಲೆ, ಸಂಸ್ಕøತಿ, ಪರಂಪರೆಗೆ ಒತ್ತು ನೀಡಲು ಶ್ರಮಿಸಲಾಗಿದೆ. ಎಲ್ಲರ ಸಹಕಾರಗಳಿಂದ ಇಂತಹ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ನಿರ್ದೇಶಕರಾದ ನಾಪಂಡ ಉಮೇಶ್ ಉತ್ತಪ್ಪ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ದುಡಿದವರನ್ನು ಗುರುತಿಸಿ ಗೌರವಿಸುವುದು ಅತ್ಯಗತ್ಯವಾಗಿದೆ. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಸಮಾಜಮುಖಿಯಾಗಿ ಯೋಚಿಸಬೇಕು. ಆ ನಿಟ್ಟಿನಲ್ಲಿ ಸಹಕಾರ ಸಂಘಗಳ ಮಹತ್ವ ಬಗ್ಗೆ ಎಲ್ಲರಲ್ಲಿಯೂ ಅರಿವಿರಬೇಕು ಎಂದರು. ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಆರ್.ವಿಜಯ್ ಕುಮಾರ್ ಅವರು ಮಾತನಾಡಿ ಸಹಕಾರ ಸಂಘಗಳ ಮಹತ್ವದ ಬಗ್ಗೆ ಮಾಹಿತಿ ನೀಡುವಲ್ಲಿ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಚಿಂತನ-ಮಂಥನ ನಡೆಯಬೇಕು ಎಂದರು. ಸಹಕಾರ ಸಂಘಗಳ ಮೂಲಕ ಗ್ರಾಮ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು. ಸಹಕಾರ ಸಂಘಗಳ ಬೆಳವಣಿಗೆಗೆ ಹಿರಿಯರು ಸಾಕಷ್ಟು ತ್ಯಾಗ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ‘ಧವಸ ಭಂಡಾರ’ ಸಹಕಾರ ಸಂಘಗಳನ್ನು ಸಹ ಸ್ಥಾಪಿಸಿ ಆಹಾರ ಭದ್ರತೆಯ ಪರಿಕಲ್ಪನೆಯ ಮಹತ್ವ ಸಾರಿದ್ದಾರೆ ಎಂದು ವಿಜಯ್ ಕುಮಾರ್ ಹೇಳಿದರು. ಇಂದಿನ ಜಾಗತಿಕ ಯುಗದಲ್ಲಿ ಸಹಕಾರ ಸಂಘಗಳು ಮತ್ತಷ್ಟು ಬಲಯುತವಾಗಬೇಕು. ಸಹಕಾರ ಸಂಘಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಕೆಐಸಿಎಂನ ನಿವೃತ್ತ ಪ್ರಾಂಶುಪಾಲರಾದ ಎಂ.ಎಂ.ಶ್ಯಾಮಲ ಅವರು ಸಹಕಾರ ಕ್ಷೇತ್ರದ ಮಹತ್ವ ಕುರಿತು ಮಾತನಾಡಿದರು. ಕೊಡಗು ಜಿಲ್ಲೆಯ ‘ಶ್ರೇಷ್ಠ ಸಹಕಾರಿ’ ಪ್ರಶಸ್ತಿಯನ್ನು ನಂದಿನೆರವಂಡ ರವಿ ಬಸಪ್ಪ, ಕಾಯಪಂಡ ಟಾಟ ಚಂಗಪ್ಪ, ಪಾಸುರ ಎನ್.ಉತ್ತಪ್ಪ, ಹಾಗೂ ಶ್ರೇಷ್ಠ ಮಹಿಳಾ ಸಹಕಾರಿ ಮೊಳ್ಳೆರ ಸರಸು ಪೊನ್ನಪ್ಪ ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಶಾಲೂ, ಫಲ-ತಾಂಬೂಲ ನೀಡಿ ಗೌರವಿಸಲಾಯಿತು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಉಪಾಧ್ಯಕ್ಷರಾದ ಪಟ್ಟಡ ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಪಿ.ಸಿ.ಅಚ್ಚಯ್ಯ, ಪ್ರೇಮ ಸೋಮಯ್ಯ, ಕೋಡಿರ ಎಂ.ತಮ್ಮಯ್ಯ, ವಿ.ಕೆ.ಅಜಯ್ ಕುಮಾರ್, ಪಿ.ಬಿ.ಯತೀಶ್, ಎ.ಎಸ್.ಶ್ಯಾಮ್ ಚಂದ್ರ, ಎನ್.ಎ.ರ್ಯಾಲಿ ಮಾದಯ್ಯ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರಾದ ಎಂ.ಎನ್.ಹೇಮಾವತಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೈಲಜಾ, ಇತರರು ಇದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು, ಮಂಜುಳಾ ಪ್ರಾರ್ಥಿಸಿದರು.