NEWS DESK ಹೌದು, ಹಿಂದೂ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಅದು ಹಿಂದೆಯು ಉಳಿದಿತು ಇಂದು ಉಳಿದಿದೆ? ಮುಂದೆ ಉಳಿಯುತ್ತದೆಯೋ ಎಂಬ ಸಂಶಯ ನನ್ನ ಮನದಲ್ಲಿ ಮೂಡುತ್ತಿದೆ. ಏಕೆಂದರೆ ಹಿಂದೂ ಧರ್ಮದ ಮೇಲೆ ಇತರ ಧರ್ಮದ ಪ್ರಭಾವವು ಹಿಂದೂ ಧರ್ಮವನ್ನು ನಾಶ ಮಾಡುತ್ತಿದೆ ಎಂಬ ಭಯ ಹಿಂದೂಗಳನ್ನು ಕಾಡುತ್ತಿದೆ. ಆದರೆ ಹಿಂದೂ ಧರ್ಮದ ಅವನತಿಗೆ ನಾವೇ ಕಾರಣ. ಅದರಲ್ಲಿ ಒಂದು ಕಾರಣ ನಮ್ಮ ದೇವಾಲಯಗಳು ಯಾವಾಗ ವ್ಯಾಪಾರ ಕೇಂದ್ರಗಳಾದವೊ ಅಲ್ಲಿಂದ ನಮ್ಮ ಧರ್ಮದ ಅವನತಿ ಆರಂಭವಾಯಿತು. ಧರ್ಮದ ಮೂಲವೇ ದೇವಾಲಯಗಳು. ಶ್ರದ್ಧೆ ಭಕ್ತಿ ಎಲ್ಲಿ ಇರಬೇಕಿತ್ತೋ ಅಲ್ಲಿ ಬೂಟಾಟಿಕೆ ಎದ್ದು ಕಾಣತೊಡಗಿತು. ಹಿಂದೂ ದೇವಾಲಯಗಳು ಪುರಾತನ ಕಾಲದಿಂದಲೂ ಸುಂದರ ಕೆತ್ತನೆ ಕೆಲಸಗಳಿಗೆ ಪ್ರಖ್ಯಾತ ಹೊಂದಿದ್ದವು. ಕೆಲವು ದೇವಾಲಯಗಳು ಇಂದಿಗೂ ವಿಜ್ಞಾನಕ್ಕೆ ಸವಾಲ್ ಆಗಿದ್ದು, ಅಷ್ಟು ವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ದೇವಸ್ಥಾನದ ಒಳಗಡೆ ಪೂಜೆ ಪುರಸ್ಕಾರ ಅಷ್ಟೇ ಸಂಪ್ರದಾಯಕ್ಕೆ ಪ್ರಾಧ್ಯಾನತೆ ನೀಡಲಾಗುತ್ತಿತ್ತು. ಯಾವಾಗ ಐಟಿ-ಬಿಟಿಯಲ್ಲಿ ರಿಯಲ್ ಎಸ್ಟೇಟ್ ಹಾಗೆ ಇತರ ಮೂಲಗಳಿಂದ ಹಣ ಹರಿದು ಬರತೊಡಗಿತೋ ಅದರೊಡನೆ ನಾಗರೀಕತೆ ಬೆಳೆಯತೊಡಗಿತು. ನಾಗರೀಕತೆ ಬೆಳೆದಂತೆ ಹೈಟೆಕ್ ಪೂಜೆಗಳು, ಅಲಂಕಾರಗಳು, ಅದ್ದೂರಿಯ ಆಭರಣಗಳು ದೇವರ ವಿಗ್ರಹಗಳ ಅಲಂಕಾರ ವಸ್ತುಗಳಾದವು. ವಿಗ್ರಹಗಳ ಅಭಿಷೇಕಕ್ಕೆ ವಿವಿಧ ಬಗ್ಗೆಯ ದ್ರವ ಮತ್ತು ಘನ ರೂಪದ ವಸ್ತುಗಳು ಸಿದ್ದವಾದವು. ಅದರೊಡನೆ ಪೂಜಾ ದರಗಳ ಪಟ್ಟಿಗಳು ದೇವಾಲಯಗಳ ಮುಂದೆ ರಾರಾಜಿಸತೊಡಗಿತು. ದೇವರ ಸೇವೆ ಅವರ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಬದಲಾವಣೆ ಕಂಡುಕೊಂಡವು. ಅದೇ ರೀತಿಯಲ್ಲಿ ಜನರ ದೋಷಗಳ ಪರಿಹಾರದ ಕೇಂದ್ರಗಳಾದವು ದೇವಾಲಯಗಳು. ಪ್ರತಿ ದೋಷದ ಪರಿಹಾರಕ್ಕೆ ದರ ಪಟ್ಟಿ ಸಿದ್ದವಾಯಿತು. ವಿಚಿತ್ರವೇನೆಂದರೆ ಇತೀಚೆಗೆ ಶ್ರೀಮಂತರಲ್ಲಿ ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳಿಗೆ ದೋಷಗಳು ಜಾಸ್ತಿ ಕಂಡು ಬರತೊಡಗಿತು. ಒಂದೆಡೆ ದೋಷ ಪರಿಹಾರಕ್ಕೆ ಪೂಜೆ, ಹೋಮ ಇವುಗಳ ಮೂಲಕ ಪರಿಹಾರ ಕಂಡು ಕೊಳ್ಳುವ ಮಾರ್ಗವಾದರೆ, ಇನೊಂದೆಡೆ ಹರಕೆ ಸಲ್ಲಿಕೆ ಮೂಲಕ ದೋಷ ಪರಿಹಾರ ಮಾರ್ಗ ಕಂಡುಕೊಂಡರು. ಹರಕೆಯಲ್ಲಿ ಎರಡು ತರಹ. ದೇವರ ವಿಗ್ರಹಗಳಿಗೆ, ಮೂರ್ತಿಗಳಿಗೆ ಅಲಂಕಾರಕ್ಕಾಗಿ ಒಡವೆ, ಕಿರೀಟ, ಓಲೆ, ಬಳೆ, ಸೀರೆ, ಸರಗಳು ಒಂದು ಇಷ್ಟಾರ್ಥ ಸಿದ್ದಿಸಿದ್ದರೆ ದೇವರಿಗೆ ಅರ್ಪಣೆ ಮಾಡುತಿದ್ದರು. ಇವುಗಳನ್ನು ಸಾಧಾರಣವಾಗಿ ರಾಜರು, ಮತ್ತೆ ಅವರ ಕುಟುಂಬದವರು, ಸಮಾಜದಲ್ಲಿ ಗಣ್ಯರು, ಶ್ರೀಮಂತರು ಮಾತ್ರ ಇವುಗಳನ್ನು ಮಾಡುತಿದ್ದರು. ಬಡವರು ಇನ್ನೊಂದು ರೀತಿಯಲ್ಲಿ ದೋಷ ಪರಿಹಾರಕ್ಕೆ ದಾರಿ ಕಂಡುಕೊಂಡರು. ಹರಕೆ ತೀರಿಸಲು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುವುದು, ದೇವಾಲಯದ ಪ್ರದಕ್ಷಿಣೆ, ಉರುಳು ಸೇವೆ, ತಲೆಮುಡಿ ತೆಗೆಸುವುದು, ಹೀಗೆ ಸ್ವತಃ ದೇಹ ದಂಡಿಸಿ ಸಣ್ಣ ಪುಟ್ಟ ಪೂಜೆ ಜಪಗಳ ಮೂಲಕ ಹರಕೆ ತೀರಿಸಿ ಮಾನಸಿಕವಾಗಿ ನೆಮ್ಮದಿ ಕಂಡುಕೊಂಡರು. ಇನ್ನು ಕೆಲವರಿಗೆ ತಮ್ಮ ಕಪ್ಪು ಹಣವನ್ನು ಹುಂಡಿಗೆ ಹಾಕುವ ಪರಿಪಾಠ ಬೆಳಸಿಕೊಂಡಿದ್ದರು. ಇದು ಹೆಚ್ಚಾಗಿ ತಿರುಪತಿಯಲ್ಲಿ ಕಂಡು ಬರುತ್ತಾ ಇತ್ತ. ಸಿ.ಸಿ. ಕ್ಯಾಮೆರಾ ಅಳವಡಿಕೆ ಪ್ರಾರಂಭ ಆದಲ್ಲಿಂದ ಈ ಪ್ರವೃತ್ತಿ ಕಡಿಮೆಯಾಗಿದೆ. ದೇವಾಲಯಗಳು ಕೂಡ ನೆಮ್ಮದಿ ಸಿಗುವ ಕೇಂದ್ರಗಳಾಗಿದ್ದವು. ದೇವಸ್ಥಾನಗಳು ಕೂಡ ಧನಾತ್ಮಕ ಪರಿಸರದಿಂದ ಕೂಡಿದ್ದು, ಧನಾತ್ಮಕ ಕಿರಣಗಳು ಹೊರಸೂಸುತ್ತದೆ. ದೇವಾಲಯದ ಪರಿಸರದಲ್ಲಿ ಅದರಲ್ಲೂ ಹಳೆಕಾಲದಲ್ಲಿ ನಿರ್ಮಾಣವಾದ ದೇವಾಲಯಗಳ ಪರಿಸರದಲ್ಲಿ ಅನೇಕ ಮಾನಸಿಕ ಕಾಯಿಲೆಗಳು ವಾಸಿಯಾದ ಉದಾಹರಣೆ ಇದೆ. ಆದರೆ ನಾಗರೀಕತೆ ಬೆಳೆದಂತೆ ಹೊಸ ಹೊಸ ದೇವರುಗಳು ಹಾಗೂ ದೇವಸ್ಥಾನಗಳು ತಲೆ ಎತ್ತಿದವು. ದೇವರುಗಳ ವಿಗ್ರಹಗಳು ಬೆಲೆಬಾಳುವ ಆಭರಣಗಳಿಯಿಂದ ಶೋಭಿಸತೊಡಗಿತು. ದೇವರುಗಳಿಗೇ ಅವರ ಅವರ ಯೋಗ್ಯತೆಗೇ ಸರಿಯಾದ ಪೂಜೆಗಳು ಸಲ್ಲಿಸುವ ಪರಿಪಾಠ ಹುಟ್ಟಿಕೊಂಡವು. ಹಿಂದೆ ಊರಿಗೊಂದು ಇದ್ದ ದೇವಸ್ಥಾನಗಳು ಹಾಗೂ ಗಣಪತಿ ಉತ್ಸವ ಬೀದಿಗೆ ನಾಲಕ್ಕರಂತೆ ಹುಟ್ಟಿದವು. ಇಲ್ಲಿ ಪೂಜೆ ಸಲ್ಲಿಸಲು ಅರ್ಚಕರು ಮತ್ತು ಆಡಳಿತ ನಡೆಸಲು ಆಡಳಿತ ಮಂಡಳಿಗಳು ಹುಟ್ಟಿಕೊಂಡವು. ಇಂತಹ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ದೇವಾಲಯಗಳನ್ನು ವ್ಯಾಪಾರಕೇಂದ್ರಗಳಾಗಿ ಪರಿವರ್ತನೆಗೊಳಿಸಿ ಜನರಿಗೆ ಮಂಕುಬೂದಿ ಎರಚಿ ಜನರ ದುರ್ಬಲ ಮನಸುಗಳನ್ನು ಹೆದರಿಸಿ ಸಾಕಷ್ಟು ಹಣ ಗಳಿಸಿದರು. ದೇವರ ದರ್ಶನಕ್ಕೂ ಸರತಿ ಸಾಲುಗಳು ಆರಂಭವಾದವು. ಇಲ್ಲೂ ದರಗಳ ಪಟ್ಟಿಗಳು ನಿಗದಿಯಾದವು. ದೇವರಿಗೆ ನ್ಯೆವೇದ್ಯ ಅರ್ಪಣೆ ಮಾಡುವುದು ಪುರಾತನ ಕಾಲದಿಂದ ನಡೆದು ಬಂದ ಪದ್ಧತಿ. ಅದಕ್ಕೆ ಒಂದು ಕಟ್ಟುಪಾಡು ಇದೆ. ಹಳೆಕಾಲದ ದೇವಾಲಯದಲ್ಲಿ ಈಗಲೂ ಪರಿಪಾಲಿಸಿಕೊಂಡು ಬರಲಾಗುತ್ತದೆ. ಭಕ್ತರು ಹೆಚ್ಚಾದಂತೆ ಇದು ಕೂಡ ವ್ಯಾಪಾರವಾಯಿತು. ಪ್ರಸಾದ ತಯಾರಿಕ ಘಟಕಗಳು ಆರಂಭವಾದವು. ಇಲ್ಲಿಯು ವ್ಯಾಪಾರ ಮನೋಭಾವನೆ ಆರಂಭವಾಯಿತು. ಜನಪ್ರಿಯ ದೇವಸ್ಥಾನದ ಹೊರಗಡೆ ಕೂಡ ಅಂಗಡಿಗಳು ವ್ಯಾಪಾರ ಕೇಂದ್ರಗಳಾದವು. ವ್ಯಾಪಾರ ನಡೆಸುವುದು ತಪ್ಪಲ್ಲ. ಅನೇಕ ಕಡೆ ಇವುಗಳು ಜನರ ಸುಲಿಗೆ ಕೇಂದ್ರ ಗಳಾಗಿವೆ. ಇಲ್ಲೂ ಮಧ್ಯವರ್ತಿ ಬೇರೆ. ಹಿಂದೆ ಪುಣ್ಯಕ್ಷೇತ್ರಗಳಿಗೆ ಹೋಗುವುದು ಅಂದರೆ ತೀರ್ಥಯಾತ್ರೆ ಹೋಗುವುದು. ಈಗ ಪ್ರವಾಸ ಹೋಗುವಂತೆ ಹೋಗಿ ಬರುವ ಪರಿಪಾಠ ಬೆಳೆದಿದ್ದು, ಅನೇಕ ದೇವಸ್ಥಾನಕ್ಕೆ ಹೋಗುವಾಗ ಕೆಲವು ಕಟ್ಟುಪಾಡುಗಳಿವೆ. ಅದನ್ನು ಪರಿಪಾಲಿಸಿ ಹೋಗಬೇಕು. ಅದು ಸಾಧ್ಯವಾಗದಿದ್ದರೆ ನಾವು ಹೋಗಬಾರದು. ಉದಾಹರಣೆಗೆ ಶಬರಿಮಲೆ.. ಇಲ್ಲಿಗೆ ಹೋಗುವಾಗ ಕೆಲವು ಕಟ್ಟುಪಾಡುಗಳಿವೆ. ಈಗ ಯಾರು ಪಾಲಿಸುವುದಿಲ್ಲ. ಇನ್ನು ಕೆಲವರಿಗೆ ಇಷ್ಟ ಬಂದಾಗಲೆಲ್ಲ ಪ್ರಖ್ಯಾತ ಕ್ಷೇತ್ರಕ್ಕೆ ಹೋಗಿ ಬರುವ ಚಟ ಬೆಳೆಸಿಕೊಂಡಿರುತ್ತಾರೆ. ಇಂತಹವರಿಂದ ಧರ್ಮ ಸಂಪ್ರದಾಯಗಳು ನಾಶವಾಗುತ್ತೆ ಹೊರತು ಇತರ ಧರ್ಮದವರಿಂದ ಅಲ್ಲ. ಏಕೆಂದರೆ ಇವರು ಶಿಷ್ಟಾಚಾರ ಮುರಿಯುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಅದೇ ಸಂದೇಶ ರವಾನೆಯಾಗುತ್ತದೆ. ಈಗ ಹಲವಾರು ಬಗ್ಗೆಯ ರಂಗೋಲಿಗಳು, ವಿವಿಧ ತರಹದ ಪೂಜೆಗಳು ಆರಂಭವಾಗಿದೆ. ಅದು ಕೂಡ ಪ್ಯಾಕೇಜ್ ಸೌಲಭ್ಯ ಕೂಡ. ಈಗ ಆನ್‍ಲೈನ್ ಪೂಜೆಯು ಆರಂಭವಾಯಿತು. ನಾನು ಇದನ್ನು ತಪ್ಪು ಎನ್ನುವುದಿಲ್ಲ. ನಾಗರೀಕತೆ ಬೆಳೆದಂತೆ ನಾವು ಬದಲಾವಣೆಯಾಗಬೇಕು. ಆದರೆ ನಮ್ಮ ಸಂಸ್ಕøತಿಯನ್ನು ನುಂಗಿಹಾಕಬಾರದು. ಇತ್ತೀಚೆಗೆ ರೇಡಿಯೋದಲ್ಲಿ ಯಕ್ಷಗಾನ ಕಾರ್ಯಕ್ರಮ ಕೇಳುವಾಗ ನಾವೇನು ಉಳಿಸಿಕೊಂಡಿದ್ದೇವೆ ಎಂಬ ನೋವು ಮನದಲ್ಲಿ ಕಾಡಿತು. ಇಂದು ಧರ್ಮ ಏನಾದ್ರು ಅಲ್ಪ ಸ್ವಲ್ಪ ಉಳಿದಿದ್ದರೆ ಅದು ಗ್ರಾಮಾಂತರ ಪ್ರದೇಶದ ದೇವಸ್ಥಾನಗಳಲ್ಲಿ ಎನ್ನಬಹುದು. ಆದರೂ ಆ ದೇವಸ್ಥಾನಕ್ಕೆ ಸಂಬಂಧಪಟ್ಟ ಕಟ್ಟುಪಾಡು ಆ ಊರಿಗೇ ಸಂಬಂಧಪಟ್ಟ ಜನರಿಗೆ ಅನ್ವಯವಾಗುತ್ತಿತ್ತು. ಅವರು ಅದನ್ನು ಎಲ್ಲಿಯೇ ವಾಸವಿರಲಿ ಪಾಲಿಸುತ್ತಿದ್ದರು. ಇಂದು ಊರಿನಲ್ಲಿ ಇರುವವರೇ ಅದನ್ನು ಪಾಲಿಸುವುದಿಲ್ಲ. ಹಿಂದೆ ಊರು ತಕ್ಕ, ದೇವಾ ತಕ್ಕ ಇರುತಿದ್ದರು. ಅವರು ಹೇಳಿದೆ ಮಾತು ಅಂತಿಮ. ಇವರು ಕೂಡ ಅಷ್ಟೇ ಕಟ್ಟುನಿಟ್ಟಿನಲ್ಲಿ ಇರುತ್ತಿದ್ದರು. ಪೂಜೆಗಳು ಕೂಡ ತುಂಬಾ ಸಂಪ್ರದಾಯ ಕಟ್ಟುಪಾಡಿಗೆ ಅನುಕ್ರಮವಾಗಿ ನಡೆಯುತ್ತಿತ್ತು. ಅಂದು ಊರ ಹಬ್ಬ ಶುರುವಾದರೆ ಕಡಿಮೆ ಅಂದರೆ ಒಂದು ವಾರದಿಂದ 15 ದಿನದವರೆಗೂ ನಡೆಯುತ್ತಿತ್ತು. ನೆಂಟರು ಬರುವುದು ಊರಿಗೆ ಊರೇ ಸೇರಿ ಸಂಭ್ರಮಪಡುತ್ತಿದ್ದ ಕಾಲವೊಂದಿತ್ತು. ಇಂದು ಗ್ರಾಮೀಣ ಪ್ರದೇಶದಲ್ಲಿ ಹಿಂದಿನ ಆಚರಣೆ ಕಡಿಮೆಯಾದರೂ ಊರಿನಲ್ಲಿ ಇರುವವರು ಮತ್ತು ಈಗಲೂ ಗ್ರಾಮೀಣ ಪ್ರದೇಶದ ಅರ್ಚಕರು ಊರಿನ ಕಟ್ಟುಪಾಡಿಗೆ ಅನುಸಾರವಾಗಿ ಹಣದ ಪ್ರಭಾವಕ್ಕೆ ಒಳಪಡದೆ ಪೂಜೆ ಸಲ್ಲಿಸುತಿರುವುದರಿಂದ ಸಂಸ್ಕೃತಿ ಉಳಿದಿರುವುದು.
ಬರಹ : ಬಾಳೆಯಡ ಕಿಶನ್ ಪೂವಯ್ಯ,
ಲೇಖಕರು ಮತ್ತು ವಕೀಲರು
ಮಡಿಕೇರಿ ಫೋನ್ : 94488995554