ಮಡಿಕೇರಿ NEWS DESK ನ.26 : ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವುದನ್ನು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನ ವಿರಾಜಪೇಟೆ ಘಟಕ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ವಿರಾಜಪೇಟೆ ಅಧ್ಯಕ್ಷ ಅಂತೋಣಿ ರಾಬಿನ್, ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ, ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಸ್ ಹಾಗೂ ಸಂಚಾಲಕ ಜಾನ್ಸನ್, ಇಬ್ಬರು ಮಹಾನ್ ಸೇನಾಧಿಕಾರಿಗಳು ಭಾರತೀಯ ಸೇನೆಗೆ ನೀಡಿದ ಕೊಡುಗೆಯನ್ನು ಮತ್ತು ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸದೆ ಅಗೌರವ ತೋರಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದೇಶಭಕ್ತಿ ಮತ್ತು ಶಿಸ್ತಿಗೆ ಹೆಸರುವಾಸಿಯಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಅವಹೇಳನ ಸೇನಾ ಘನತೆಗೆ ದಕ್ಕೆ ತಂದಿದೆ. ಇದೊಂದು ಪ್ರಚೋದನಾಕಾರಿ ಹೇಳಿಕೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸದಾ ದೇಶ ರಕ್ಷಕರಾದ ವೀರ ಪರಂಪರೆಯ ಪರವಾಗಿ ಇರಲಿದೆ. ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಮಹಾನ್ ಸೇನಾನಿಗಳ ಬಗ್ಗೆ ಅಗೌರವ ಮೂಡಿಸಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಅಂತೋಣಿ ರಾಬಿನ್ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಯಾರ ಭಾವನೆಗೂ ದಕ್ಕೆ ತರಬಾರದು ಮತ್ತು ಸಭ್ಯತೆಯನ್ನು ಮೀರಬಾರದು. ವೀರ ಸೇನಾನಿಗಳಿಗೆ ಗೌರವ ತೋರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ತಿಳಿಸಿದ್ದಾರೆ.










