ನಾಪೋಕ್ಲು ನ.25 NEWS DESK : ಭಾರತೀಯ ಸೇನೆಯ ಚಿನ್ನದ ಕಿರೀಟದಂತಿದ್ದ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುರುವುದು ಶಿಕ್ಷಾರ್ಹ ಅಪರಾಧ ಎಂದು ನಾಪೋಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡೀರ ನಾಣಯ್ಯ ಹೇಳಿದರು. ಮಾಜಿ ಸೈನಿಕರ ಸಂಘದ ವತಿಯಿಂದ ನಾಪೋಕ್ಲು ಮಹಿಳಾ ಸಮಾಜದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಗರಿಕ ಸಮಾಜದಲ್ಲಿ ಈ ರೀತಿಯ ಬೆಳವಣಿಗೆ ಒಳ್ಳೆಯದಲ್ಲ. ದೇಶದ್ರೋಹಿಗಳನ್ನು ಪ್ರಚೋದಿಸುವ ಹೇಳಿಕೆ ನೀಡಿರುವುದನ್ನು ಮಾಜಿ ಸೈನಿಕರ ಸಂಘ ತೀವ್ರವಾಗಿ ಖಂಡಿಸುತ್ತದೆ. ಇವರನ್ನು ಸರ್ಕಾರ ಗಡಿಪಾರು ಮಾಡಿ ವಕೀಲ ವೃತ್ತಿಯಲ್ಲಿ ಮುಂದುವರಿಯದಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಅಪ್ಪುಮಣಿಯಂಡ ನಾಣಯ್ಯ, ಕಾರ್ಯದರ್ಶಿ ಕೇಟೋಳಿರ ಅಚ್ಚಪ್ಪ, ಖಜಾಂಚಿ ಕರೀಂ, ನಿರ್ದೇಶಕರಾದ ಪುಲ್ಲೇರ ಪಳಂಗಪ್ಪ, ಪಾಡಿಯಮ್ಮಂಡ ಅಪ್ಪಣ್ಣಮಯ್ಯ, ಅಮ್ಮಂಡ ಅಶೋಕ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.