ಮಡಿಕೇರಿ ನ.30 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು, ಮೂರ್ನಾಡು ಹೋಬಳಿ ಘಟಕ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ, ಮೂರ್ನಾಡು ಹೋಬಳಿ ಘಟಕದ ವಿವಿಧ ಶಾಲಾ ಕಾಲೇಜು, ವಿದ್ಯಾ ಸಂಸ್ಥೆಗಳು ಹಾಗೂ ವಿವಿಧ ಸಾರ್ವಜನಿಕ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮೂರ್ನಾಡುವಿನ ಪಿ.ಎಂ ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೂರ್ನಾಡು ವಿದ್ಯಾ ಸಂಸ್ಥೆಯ ಕಾಲೇಜು ಮೈದಾನದಲ್ಲಿ ಕೊಡಗಿನ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು, ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ರವಿ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಡೊಳ್ಳು ಬಾರಿಸುವ ಮೂಲಕ ವರ್ಣರಂಜಿತ ಬೃಹತ್ ಕನ್ನಡ ಮೆರವಣಿಗೆಯನ್ನು ಉದ್ಘಾಟಿಸಿದರು. ಮೂರ್ನಾಡುವಿನ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತರು, ವಿವಿಧ ಸ್ತ್ರೀ ಶಕ್ತಿ ಸಂಘಗಳು, ಟೈಲರ್ ಅಸೋಸಿಯೇಷನ್, ಗಜಾನನ, ಆಪ್ತಮಿತ್ರ, ಸ್ವಸ್ತಿಕ್, ರಾಮ ಮಂದಿರ, ಮೂರ್ನಾಡು, ಗಾಂಧಿನಗರ, ಜೈಭೀಮ್ ಸಂಘ, ಅಯ್ಯಪ್ಪ ಯುವಕ ಮಂಡಳಿ, ತ್ರಿನೇತ್ರ, ನಕ್ಷತ್ರ, ಫ್ರೆಂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಸಂಘ, ಧರ್ಮಸ್ಥಳ ಸಂಘ, ಸಂಜೀವಿನಿ ಒಕ್ಕೂಟ, ವಿನಾಯಕ ಕೇರಿ ಸದಸ್ಯರು, ಕೊಡವ, ಗೌಡ, ಮಲಯಾಳಿ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳು, ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಕನ್ನಡ ಅಭಿಮಾನಿಗಳು, ಕಳಸ ಹೊತ್ತ ಮಹಿಳೆಯರು, ನಾಡಿನ ದಾರ್ಶನಿಕರ ವೇಷಧಾರಿಗಳು, ಕನ್ನಡ ಭಾಷೆಯ ವಿವಿಧ ಘೋಷಣೆಗಳ ಸ್ತಬ್ಧ ಚಿತ್ರ, ಮಂಡ್ಯದಿಂದ ಆಗಮಿಸಿದ ಡೊಳ್ಳು ಕುಣಿತ ಸೇರಿದಂತೆ ಭುವನೇಶ್ವರಿ ತಾಯಿಯ ಕಲಾಕೃತಿ ಆಕರ್ಷಕ ಹೂವಿನ ಅಲಂಕೃತ ರಥದೊಂದಿಗೆ ಮೂರ್ನಾಡು ಪಟ್ಟಣದಲ್ಲಿ ಮೆರವಣಿಗೆ ಸಾಗಿತು. ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್ ವೇದಿಕೆ ಬಳಿಗೆ ಮೆರವಣಿಗೆ ಆಗಮಿಸಿತು. ಕಸಾಪ ಪದಾಧಿಕಾರಿ ಮುನೀರ್ ಹಾಗೂ ಶಿಕ್ಷಕ ಪಿ.ಆರ್.ರಾಜೇಶ್ ಮೆರವಣಿಗೆಯ ನಿರೂಪಣೆಯನ್ನು ಮಾಡಿದರು. ನಂತರ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಕುಶನ್ ರೈ ರಾಷ್ಟ್ರಧ್ವಜ ಹಾಗೂ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ನಾಡ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಟೈಲರ್ ಅಸೋಸಿಯೇಷನ್ ನ 21 ಸದಸ್ಯರು ರಾಷ್ಟ್ರಗೀತೆಯನ್ನು ಮತ್ತು ಮೂರ್ನಾಡು ಪ್ರೌಢಶಾಲೆಯ 51 ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು. ಕುಮಾರಿ ಮುಕ್ಕಾಟಿರ ಹಿತೈಷಿ ಅವರ ಭರತನಾಟ್ಯದ ನಂತರ ಸಭಾ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಎಲ್ಲೆಡೆ ರಾಜ್ಯೋತ್ಸವ ಆಚರಣೆಗೊಳ್ಳುತ್ತಿದ್ದು, ಮೂರ್ನಾಡುವಿನಲ್ಲಿ ರಾಜ್ಯೋತ್ಸವವನ್ನು ಸಮ್ಮೇಳನದ ರೀತಿಯಲ್ಲಿ ನಡೆಸುತ್ತಿರುವುದು ಶ್ಲಾಘಿನೀಯ. ವರ್ಷದ್ದುದ್ದಕ್ಕೂ ಕನ್ನಡ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಸ್ಥಾನಮಾನ ನೀಡಬೇಕು. ಶಿಕ್ಷಣದಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಬೇಕು. ಎಲ್ಲರೂ ಕನ್ನಡದ ಕಂಪನ್ನು ಪಸರಿಸಲು ಕೈಜೋಡಿಸಬೇಕೆಂದು ಕರೆ ನೀಡಿದರು. ಮಡಿಕೇರಿ ತಾಲೂಕು ಕಸಾಪದ ಅಧ್ಯಕ್ಷರಾದ ಕಡ್ಲೆರ ತುಳಸಿ ಮಾತನಾಡಿ, ಸರಕಾರದ ಯಾವುದೇ ಅನುದಾನವಿಲ್ಲದೆ ಮೂರ್ನಾಡುವಿನಲ್ಲಿ ರಾಜ್ಯೋತ್ಸವವನ್ನು ಸಮ್ಮೇಳನದ ರೀತಿಯಲ್ಲಿ ಆಚರಣೆ ಮಾಡಿರುವ ಮೂರ್ನಾಡು ಹೋಬಳಿ ಘಟಕಕ್ಕೂ ಹಾಗೂ ಇಲ್ಲಿನ ವಿವಿಧ ಸಂಘ ಸಂಸ್ಥೆಗಳಿಗೂ ಧನ್ಯವಾದಗಳನ್ನು ತಿಳಿಸಿದರು. ರಾಜ್ಯೋತ್ಸವದ ಮೆರವಣಿಗೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಕನ್ನಡ ಸಾಹಿತ್ಯ ಲೋಕದ ಬಗ್ಗೆ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಇತರ ಭಾಷೆಗಳನ್ನು ಕನ್ನಡ ಭಾಷೆಯೊಂದಿಗೆ ಒಪ್ಪಿಕೊಂಡಿರುತ್ತೇವೆ. ಆದರೆ ನಾವು ನಮ್ಮ ಆಡುಭಾಷೆ ಕನ್ನಡವನ್ನು ಮರೆಯಬಾರದು ಅದನ್ನು ನಿರಂತರವಾಗಿ ಬೆಳೆಸುವ ಪ್ರಯತ್ನ ಮುಂದುವರಿಯಬೇಕು ಎಂದರು. ಕನ್ನಡ ಭಾಷೆಗೆ ಎಲ್ಲಾ ಭಾಷೆಗಳನ್ನು ಸೇರಿಸಿಕೊಂಡು ಹೋಗುವ ದೊಡ್ಡ ಶಕ್ತಿ ಇದೆ. ಪ್ರಸ್ತುತ ವಿದ್ಯಮಾನದ ಹಲವು ವಿಚಾರಗಳನ್ನು ಹಾಸ್ಯಭರಿತ ಪ್ರಸಂಗದಲ್ಲಿ ವಿವರಿಸಿದರು. ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ ಮೂರ್ನಾಡಿನ ಕಾರ್ಯಕ್ರಮ ಸರ್ವಜನರ ಒಗ್ಗಟ್ಟನ್ನು ಎತ್ತಿ ತೋರಿಸುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವಂತೆ ಕರೆ ನೀಡಿದರು.
ಮಡಿಕೇರಿಯ ಖ್ಯಾತ ಇಎನ್‍ಟಿ ವೈದ್ಯ ಮೋಹನ್ ಅಪ್ಪಾಜಿ ಅವರು, ಕನ್ನಡ ಭಾಷೆ ದೇಶವಿದೇಶಗಳಲ್ಲೂ ಪ್ರಾಮುಖ್ಯತೆಯನ್ನು ಪಡೆದಿರುವ ಬಗ್ಗೆ ತಮ್ಮ ಸ್ವಂತ ಅನುಭವದ ಮಾತುಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಈರಮಂಡ ಹರಿಣಿ ವಿಜಯ್ ಇಲ್ಲಿಯವರೆಗೆ ಕನ್ನಡಕ್ಕಾಗಿ ಶ್ರಮಿಸಿದವರನ್ನು ನೆನೆಪಿಸಿಕೊಂಡರು. ಸರಕಾರದ ಅನುದಾನವಿಲ್ಲದೆ ಆಡಂಬರವಾಗಿ ನಡೆದ ಕನ್ನಡ ಹಬ್ಬದ ಭವ್ಯ ಮೆರವಣಿಗೆ, ಸಭಾ ಕಾರ್ಯಕ್ರಮ ಮತ್ತು ಊಟೋಪಚಾರಕ್ಕೆ ಕೈ ಜೋಡಿಸಿದ ಮೂರ್ನಾಡು ಪಟ್ಟಣದ ಎಲ್ಲಾ ಸಂಘ ಸಂಸ್ಥೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕನ್ನಡ ಭಾಷೆ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಸರ್ವರೂ ಪಣ ತೊಡಬೇಕು. ಅಂಗಡಿ ಮುಂಗಟ್ಟುಗಳ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಮನವಿ ಮಾಡಿದರು.
ಮುಂದಿನ ದಿನಗಳಲ್ಲೂ ಕನ್ನಡ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ. ನಮ್ಮಲ್ಲೂ ಕನ್ನಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಿಂದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಶಿಕ್ಷಣ ಹಾಗೂ ಸಮಾಜಸೇವೆಗಾಗಿ ನಿವೃತ್ತ ಶಿಕ್ಷಕಿ ಬಾಚೆಟ್ಟಿರ ಕಮಲು ಮುದ್ದಯ್ಯ, 10ನೇ ತರಗತಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದು ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನಿಶ್ಮಿತ ಹಾಗೂ ಕೋವಿಡ್ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿದ ಕುಟ್ಟಪ್ಪ ಹಾಗೂ ಅಬೂಬುಕರ್ ಅವರುಗಳನ್ನು ಅತಿಥಿಗಳಾಗಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಕ.ಸಾ.ಪದ ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷರಾದ ಪುದಿನೆರವನ ರೇವತಿ ರಮೇಶ್ ಹಾಗೂ ಗಣ್ಯರು ಸನ್ಮಾನಿಸಿದರು. ಹಿರಿಯ ಸಾಹಿತಿಗಳಾದ ಉಳುವಂಗಡ ಕಾವೇರಿ ಉದಯರವರ “ಪವಿತ್ರ ಪ್ರೀತಿ ಪ್ರಾಪ್ತಿ “ಎಂಬ ಪುಸ್ತಕವನ್ನು ಸಾಹಿತಿ ಕಿಗ್ಗಾಲು ಗಿರೀಶ್ ಅವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಮೂರ್ನಾಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಕಂದಾಯ ಪರಿವೀಕ್ಷಕ ಚಂದ್ರಪ್ರಸಾದ್, ಮೂರ್ನಾಡು ಗ್ರಾಮಾಡಳಿತ ಅಧಿಕಾರಿ ಅಕ್ಷತಾ ಬಿ.ಶೆಟ್ಟಿ, ಶಿಶುಪಾಲನ ಸಂಸ್ಥೆಯ ಅಧಿಕಾರಿ ಮೇಪಾಡಾಂಡ ಸವಿತಾ ಕೀರ್ತನ್, ಮೂರ್ನಾಡು ಶಾಲೆ ಅಧ್ಯಕ್ಷ ವೆಂಕಪ್ಪ, ಪತ್ರಕರ್ತ ಕುಡೆಕಲ್ ಸಂತೋಷ್, ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಶೇಕ್ ಅಹಮದ್, ಕವಿಯತ್ರಿ ರಮ್ಯ, ಮೂರ್ನಾಡು ಕಸಾಪ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಕೋಶಾಧಿಕಾರಿ ವಿಂಧ್ಯ ದೇವಯ್ಯ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಿಎಂ ಶ್ರೀ ಶಾಲೆ ಶಿಕ್ಷಕಿ ಎ.ಸಿ.ಜ್ಯೋತಿ ಪ್ರಾರ್ಥಿಸಿ, ಮೂರ್ನಾಡು ಹೋಬಳಿ ಘಟಕದ ಕಸಾಪ ಸಂಘಟನೆ ಕಾರ್ಯದರ್ಶಿ ಜಾಶೀರ್ ಸ್ವಾಗತಿಸಿ, ಶಾಲೆಯ ಮುಖ್ಯೋಪಾಧ್ಯಾಯನಿ ಪುಷ್ಪಾವತಿ ವಂದಿಸಿದರು. ಕಸಾಪ ಪದಾಧಿಕಾರಿ ಕಲ್ಪನಾ ಸಾಮ್ರಾಟ್, ಪಿಎಂ ಶ್ರೀ ಶಾಲೆಯ ಶಿಕ್ಷಕಿಯರಾದ ಪ್ರೇಮಲತಾ ಶೆಟ್ಟಿ, ಗೌತಮಿ ಅಶೋಕ್, ನಿರ್ಮಲ ಅವರು ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರ್ನಾಡು ಹೋಬಳಿಯ ವಿವಿಧ ಎಂಟು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸ್ಟೆಪ್ ಅಪ್ ಶಾಡೋ ಡಾನ್ಸ್ ಅಕಾಡಮಿಯ ಕನ್ನಡ ನೃತ್ಯಗಳು ಆಕರ್ಷಿಸಿದವು ಮತ್ತು ಕನ್ನಡಾಭಿಮಾನಿಗಳ ಪ್ರಶಂಸೆಗೆ ಪಾತ್ರವಾದವು. ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿಗೆ ರುಚಿ ರುಚಿಯಾದ ಉಪಹಾರ, ಊಟ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.