ಮಡಿಕೇರಿ ಡಿ.4 NEWS DESK : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಜನ ಸಮುದಾಯವನ್ನು ತಲುಪಿದೆ ಎನ್ನುವುದನ್ನು ತಿಳಿಸುವ ನಿಟ್ಟಿನಲ್ಲಿ ಹಾಸನದಲ್ಲಿ ಡಿ.5 ರಂದು ಆಯೋಜಿತವಾಗಿರುವ ‘ಸ್ವಾಭಿಮಾನಿ’ ಸಮಾವೇಶಕ್ಕೆ ಕೊಡಗಿನಿಂದ 5 ರಿಂದ 8 ಸಾವಿರ ಮಂದಿ ತೆರಳುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಪೂರಕವಾಗಿ ಕೊಡಗಿನಿಂದ 50 ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್ ಮಟ್ಟ ಮತ್ತು ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಪಟ್ಟಣ ಪ್ರದೇಶಗಳಿಂದ ಹೆಚ್ಚಿನ ಬಸ್ ಗಳು ತೆರಳಲಿವೆ ಎಂದರು. ಕೊಡಗಿನ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
::: ಭಾವನೆಗಳ ಮೇಲೆ ಬಿಜೆಪಿ ರಾಜಕಾರಣ :::
ಜನರ ಭಾವನೆಗಳ ಮೇಲೆ ಬಿಜೆಪಿ ರಾಜಕಾರಣವನ್ನು ಮಾಡುತ್ತಿದ್ದರೆ, ಕಾಂಗ್ರೆಸ್ ಪಕ್ಷ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನ ಸಾಮಾನ್ಯರ ಬದುಕನ್ನು ಸುಧಾರಿಸಿದೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜಕಾರಣವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದೆ ಎಂದರು.
ಸ್ವಾಭಿಮಾನಿ ಸಮಾವೇಶಕ್ಕೆ ಸಮಾನತೆಯ ಮೇಲೆ ನಂಬಿಕೆಯನ್ನು ಹೊಂದಿರುವ, ಸಂವಿಧಾನವನ್ನು ಗೌರವಿಸುವ ಸಾಕಷ್ಟು ಪ್ರಗತಿಪರ ಸಂಘಟನೆಗಳು ಈಗಾಗಲೆ ತಮ್ಮ ಬೆಂಬಲವನ್ನು ಸೂಚಿಸಿದ್ದು, ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟಿ.ಪಿ.ರಮೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್, ಮುನೀರ್ ಅಹಮ್ಮದ್ ಹಾಗೂ ಮೂಡ ಮಾಜಿ ಅಧ್ಯಕ್ಷ ಎ.ಸಿ.ಚುಮ್ಮಿ ದೇವಯ್ಯ ಉಪಸ್ಥಿತರಿದ್ದರು.