ಮಡಿಕೇರಿ ಡಿ.4 NEWS DESK : ಕೊಡಗಿನ ಪರಿಸರಕ್ಕೆ ಮಾರಕವಾಗಿರುವ ಬೃಹತ್ ಲೇಔಟ್ ಹಾಗೂ ಮೆಗಾ ಟೌನ್‍ಶಿಪ್ ಗಳಿಗಾಗಿ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು. ಜನಜಾಗೃತಿಯ ನೇತೃತ್ವ ವಹಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರ್ನಾಟಕ ಭೂ ಸುಧಾರಣಾ ಕಾಯ್ದೆ 2020-21ರ ಲೋಪದೋಷಗಳ ದುರ್ಲಾಭ ಪಡೆದು ಕರ್ನಾಟಕದ 29 ಜಿಲ್ಲೆಗಳ, ಭಾರತದ 29 ರಾಜ್ಯಗಳ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ, ಜಗತ್ತಿನ 193 ದೇಶಗಳ ರಾಜಕಾರಣಿಗಳು, ಅಧಿಕಾರಶಾಹಿಗಳು ಹಾಗೂ ಆರ್ಥಿಕ ಅಪರಾಧಿಗಳು ಕೊಡವ ಲ್ಯಾಂಡ್‍ನಲ್ಲಿ ಬೇನಾಮಿ ಆಸ್ತಿಯನ್ನು ಹೊಂದಿದ್ದು, ಈ ಪವಿತ್ರ ನೆಲೆ, ನೆಲ, ಜಲಮೂಲ ಮತ್ತು ಪ್ರಕೃತಿಯನ್ನು ಲೂಟಿಮಾಡಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಮುಂದೊಂದು ದಿನ ಕಡಿಯತ್ ನಾಡಿನ ಪವಿತ್ರ ಮಲೆತಿರಿಕೆ ದೇವ ನೆಲೆಯ ಕುಂದ್ ಹಾಗೂ ಮನಮೋಹಕ ಚೋಮ ಕುಂದ್ ಮತ್ತು ನಯನ ಮನೋಹರ ಬೆಪ್ಪುನಾಡಿನ ಅಸ್ಮಿತೆ ಉಳಿಯುವುದಿಲ್ಲವೆಂದು ಅವರು ಆತಂಕ ವ್ಯಕ್ತಪಡಿಸಿದರು. ಕೊಡವ ಲ್ಯಾಂಡ್ ನ ಉಳಿವಿಗಾಗಿ ಆದಿಮಸಂಜಾತ ಕೊಡವರ ಭೂಮಿಗೆ ಶಾಸನ ಬದ್ಧ ಭದ್ರತೆಯನ್ನು ಕಲ್ಪಿಸುವುದು, ಆದಿಮಸಂಜಾತ ಕೊಡವರ ಸಂಸ್ಕೃತಿ, ಪರಂಪರೆ ಪೂರ್ವಾರ್ಜಿತ ಆಸ್ತಿ ರಕ್ಷಣೆಗೆ ಸ್ವಯಂ ನಿರ್ಣಯದ ಹಕ್ಕು, ಕೊಡವ ಲ್ಯಾಂಡ್ ಮತ್ತು ಎಸ್.ಟಿ ಸ್ಥಾನಮಾನ ಸ್ಥಾಪಿಸಬೇಕಾಗಿದೆ ಎಂದರು. ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ದುರುಪಯೋಗ ಮಾಡಿ ಸಿದ್ದಾಪುರದಲ್ಲಿ ತೋಟವನ್ನು ಭೂಪರಿವರ್ತನೆ ಮಾಡಿ ಬೃಹತ್ ನಗರ ನಿರ್ಮಿಸುವ ಹುನ್ನಾರ ನಡೆದಿದೆ. ಬರಪೊಳೆ, ಕೊಂಗಣಪೊಳೆ ಸೇರಿದಂತೆ ಕಾವೇರಿ ನದಿಯ ಹಲವಾರು ಉಪ ನದಿಗಳಿಗೆ ಜೀವಜಲ ಮತ್ತು ಜೀವಸೆಲೆಯಾಗಿರುವ ಕೊಡವ ಲ್ಯಾಂಡ್‍ನ ಆಯಕಟ್ಟಿನ ಸ್ಥಳವಾದ ಪೆರುಂಬಾಡಿ, ಬಾಳುಗೋಡು, ನಾಂಗಾಲ, ಬುಟ್ಟಂಗಾಲಗಳಲ್ಲಿ ಕೂಡ 2020-21ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಹುಳುಕುಗಳ ಮೂಲಕ ನೆಲ ಕಬಳಿಸಲು ಹದ್ದಿನ ಕಣ್ಣಿಟ್ಟಿರುವ ಹೊರಗಿನ ಬಂಡವಾಳಶಾಹಿ, ರೆಸಾರ್ಟ್ ಮಾಫಿಯಾ ಹಾಗೂ ಟೌನ್‍ಶಿಪ್ ಧಣಿಗಳು, ಹವಾಲ ದಂಧೆಕೋರರು ತಮ್ಮ ಕರಾಳ ವಿಷ ವರ್ತುಲಗಳ ಮೂಲಕ ಇಡೀ ಪ್ರದೇಶದ ಕೃಷಿ ಭೂಮಿಯನ್ನು ಕಬ್ಜ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಜಲಮೂಲ ಬಸಿದು ಗುಡ್ಡ-ಬೆಟ್ಟ ಕೊರೆದು ಕಾಡು, ಪ್ರಾಕೃತಿಕ ಸಂಪನ್ಮೂಲ ಲೂಟಿಮಾಡಿ ಕೊಡವ ಜನಪದ ಸಂಸ್ಕೃತಿಯ ಗರ್ಭಗುಡಿಯಾದ “ಮಂದ್”, ಗ್ರಾಮದೇವತೆ – ನಾಡ್ ದೇವತೆಗಳ ನೆಲೆಗಳನ್ನು ಧ್ವಂಸ ಮಾಡಿ ಕೊಡವ ಜನಸಂಖ್ಯಾ ಶಾಸ್ತ್ರದ ನರಮಂಡಲವಾಗಿರುವ ಪೆರವನಾಡ್, ಬೇರಳಿನಾಡ್ ಮತ್ತು ಕುತ್ತು ನಾಡ್ ಪ್ರದೇಶದ ಜನಸಂಖ್ಯಾ ಪಲ್ಲಟಕೆ ಹೊಂಚು ಹಾಕುತ್ತಿದ್ದಾರೆ. ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್ ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ. ಟೌನ್‍ಶಿಪ್, ವಿಲ್ಲಾ ಮತ್ತು ರೆಸಾರ್ಟ್ ಗಳ ಮೂಲಕ ಕೊಡವ ಲ್ಯಾಂಡ್‍ನ ಪಾವಿತ್ರತೆಯನ್ನು ಮಲೀನ ಮಾಡಿ ಜಲಮೂಲ ಬಸಿದು, ಭೂಗರ್ಭ ಸೀಳಿ ರಮಣೀಯ ನಿಸರ್ಗ, ಮನಮೋಹಕ ಪರ್ವತ ಶ್ರೇಣಿಗಳನ್ನು ನಾಶಮಾಡಲಾಗುತ್ತಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಬರುವ ಪೇರೂರು ಬಲ್ಲಮಾವಟಿ ಪ್ರದೇಶದಲ್ಲಿ ಬರುವ ಕಾವೇರಿಯ ಉಪನದಿ “ಕಪ್ಪೊಳೆಯ” ಜಲಮೂಲವನ್ನು ಧ್ವಂಸಮಾಡುವ ಯತ್ನ ನಡೆಯುತ್ತಿದೆ. ಜಲದೇವತೆ ಕಾವೇರಿಯ ಪುಣ್ಯಸ್ಥಳವು ಸುಪ್ರಸಿದ್ಧ ತೀರ್ಥಯಾತ್ರ ಕ್ಷೇತ್ರವಾಗಿದ್ದು, ಇದು ಪ್ರವಾಸಿತಾಣವಾಗುವ ಬದಲು ಆಧ್ಯಾತ್ಮಿಕ, ಪಾರಮಾರ್ಥಿಕ ನೆಲೆಯಾಗಿ ಉಳಿದು ಮುಂದುವರೆಯಬೇಕು. ಭೂಸುಧರಣಾ ತಿದ್ದುಪಡಿ ಕಾಯ್ದೆಯ ದುರ್ಬಳಕೆಯಾಗದಂತೆ ಸಾತ್ವಿಕ ಪ್ರತಿರೋಧವನ್ನ ಸಿಎನ್‍ಸಿ ಒಡ್ಡುತ್ತಾ ಬಂದಿದೆ ಎಂದು ತಿಳಿಸಿದರು. ಕರಾಳ ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಹೊರ ರಾಜ್ಯ ಹೊರದೇಶದ ಉದ್ಯಮಪತಿಗಳು ಎಗ್ಗಿಲ್ಲದೆ ಕೊಡವ ಲ್ಯಾಂಡ್‍ನಲ್ಲಿ ಭೂಕಬ್ಜದಲ್ಲಿ ತೊಡಗಿದ್ದರೆ ಅವರು ಕರೆದು ತಂದ ಹೊರ ರಾಜ್ಯದ ಮತ್ತು ಶತ್ರು ರಾಷ್ಟ್ರದ ಕಾರ್ಮಿಕರು ಇಲ್ಲಿ ಆಧಾರ್ ಮತ್ತು ಓಟರ್ ಐಡಿ ಪಡೆದು ಭೂರಹಿತ ಶೋಷಿತರೆಂದು ಬಿಂಬಿಸುವ ಮೂಲಕ ಅಕ್ರಮ-ಸಕ್ರಮ ಮತ್ತು ಆಶ್ರಯ ಯೋಜನೆಯ ಫಲಾನುಭವಿಗಳಾಗಿ ಇಲ್ಲಿನ ಜನಸಂಖ್ಯಾ ಶಾಸ್ತ್ರದ ಪಲ್ಲಟಕ್ಕೆ ಕಾರಣವಾಗಿ ಇಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿದ್ದಾರೆ. ಇವರಿಗೆ ಭ್ರಷ್ಟ ಅಧಿಕಾರಶಾಯಿ ಮತ್ತು ಮತ ಭಿಕ್ಷುಕ ರಾಜಕೀಯ ಸಂಕುಲಗಳ ಬೆಂಬಲವಿದೆ.
ಕೊಡವರ ಸ್ವಾಧೀನದಲ್ಲಿರುವ ಯುಗ ಯುಗಗಳ ಭೂಮಿಯನ್ನು ಕೊಡವರಿಗೆ 30 ವರ್ಷಗಳ ಗುತ್ತಿಗೆಗೆ ನೀಡುವ ಸರ್ಕಾರದ ಯೋಜನೆಯನ್ನು ಈ ದುಷ್ಟಕೂಟ ವಿಫಲಗೊಳಿಸಲು ಯತ್ನಿಸುವ ಮೂಲಕ ಕೊಡವರನ್ನು ಸಂಕಷ್ಟ ಮತ್ತು ಆತಂಕಕ್ಕೆ ತಳ್ಳಿದ್ದಾರೆ. ಇವರುಗಳಿಂದ ಈ ಮೇಲ್ಕಾಣಿಸಿದ ಬಂಡವಾಳಶಾಹಿಗಳು ಮತ್ತು ಅವರು ಕರೆ ತಂದ ಜನರಿಂದ ಇಲ್ಲಿನ ಪರಿಸರ, ಪ್ರಕೃತಿ, ಸಂಸ್ಕೃತಿ, ಜಲಮೂಲ, ಸಾಮಾಜಿಕ ಸಂರಕ್ಷಣೆ ಮತ್ತು ಜನಾಂಗೀಯ ಶಾಸ್ತ್ರ ಸಂಪೂರ್ಣ ಬುಡಮೇಲಾಗುತ್ತಿದೆ. ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಾಗಿ ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆ ಎಂದರೆ ಹಸಿರ ಬೆಟ್ಟಗುಡ್ಡಗಳನ್ನು ಕಡಿದು ಜಲನಾಳಗಳನ್ನು ನಾಶಪಡಿಸುವುದೇ ಎನ್ನುವುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗೆ ಕೇವಲ ಹಣವಷ್ಟೇ ಬೇಕಾಗಿದೆ. ಮಾಫಿಯಾಗಳು ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕೇಂದ್ರಗಳು ಮತ್ತು ಕ್ರೀಡೋತ್ಸವಗಳಿಗೆ ದೇಣಿಗೆ ನೀಡಿ ಜನರ ಗಮನವನ್ನು ಬೇರೆಡೆಗೆ ಸೆಳೆದು ಕರ್ನಾಟಕ ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ. ಪರಿಸರದ ಮೇಲೆ ದಾಳಿ ಮಾಡಿ ಅನಾರೋಗ್ಯಕರ ಪರಿಸ್ಥಿತಿಯನ್ನು ಸೃಷ್ಟಿಸಿ, ತಮ್ಮ ತಪ್ಪನ್ನು ಮುಚ್ಚಿ ಹಾಕಲು ವೈದ್ಯಕೀಯ ಸೇವೆ ನೀಡಿದಂತೆ ಮಾಡಿ ಸಾಮಾಜಿಕ ಕಳಕಳಿಯ ನಾಟಕವಾಡುತ್ತಿದ್ದಾರೆ. ರಾಜಕಾರಣಿಗಳು ಮತಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡುತ್ತಿದ್ದಾರೆ. ನಕಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಗಳನ್ನು ಮಾಡಿಕೊಡುತ್ತಿದ್ದಾರೆ. ಅಲ್ಲದೆ ಶೋಷಿತರು ಎನ್ನುವ ಹಣೆಪಟ್ಟಿ ಕಟ್ಟಿ ಬಿರುನಾಣಿ ಮತ್ತು ಹೈಸೊಡ್ಲೂರು ಭಾಗದಲ್ಲಿ ಅಕ್ರಮ ಸಕ್ರಮದಡಿ ನೆಲೆ ಕಲ್ಪಿಸಲು ಹೊಂಚು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಪ್ಪುಹಣವನ್ನು ಬಿಳಿ ಮಾಡುವುದಕ್ಕಾಗಿ ಕೊಡಗಿನ ಪ್ರಕೃತಿಯ ಮೇಲೆ ದಾಳಿ ನಡೆಸಿ ರೆಸಾರ್ಟ್, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣಕ್ಕಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುತ್ತಿರುವ ಮಾಫಿಯಾಗಳು ಅರಣ್ಯ ಪ್ರದೇಶವನ್ನು ಕೂಡ ಒತ್ತುವರಿ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಸಾವಿರಾರು ಮರಗಳು ಹನನವಾಗುತ್ತಿವೆ, ಜಲನಾಳಗಳು ನಾಶವಾಗುತ್ತಿವೆ. ಭಾರೀ ಸ್ಫೋಟಕಗಳನ್ನು ಬಳಸಿ ಭೂಗರ್ಭಕ್ಕೆ ಹಾನಿ ಮಾಡಲಾಗುತ್ತಿದೆ. ಪ್ರಾಕೃತಿಕ ವಿಕೋಪದ ಅಪವಾದಗಳನ್ನು ಅಮಾಯಕ ಕೊಡವರ ಮೇಲೆ ಹಾಕಲಾಗುತ್ತಿದೆ. ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದು ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದರು. ಕೊಡವರು ನಡೆಸುತ್ತಿರುವ ಪರಿಸರ ಸ್ನೇಹಿ ಹೋಂಸ್ಟೇಗಳ ವಿರುದ್ಧ ರೆಸಾರ್ಟ್ ಮಾಫಿಯಾಗಳು ಸಂಚು ರೂಪಿಸುತ್ತಿವೆ. ಕೊಡವರು ಸಂಚರಿಸುವ ಸಾಂಪ್ರದಾಯಿಕ ರಸ್ತೆಗಳಿಗೆ ಬೇಲಿ ನಿರ್ಮಿಸಿ ಅಡ್ಡಿಪಡಿಸುತ್ತಿವೆ. ಕೊಡವರು ತಮ್ಮ ಗೃಹ ಉಪಯೋಗಕ್ಕೆ ತಾವು ನೆಟ್ಟ ಸಿಲ್ವರ್ ಮರ ಕಡಿತಲೆಯನ್ನು ಬೊಟ್ಟು ಮಾಡಿ ಸರ್ಕಾರ ಉಪದ್ರವ ನೀಡುತ್ತಿದೆ. ದೊಡ್ಡ ದೊಡ್ಡ ರೆಸಾರ್ಟ್‍ಗಳಿಗೆ ಪರ್ವತವನ್ನು ಬಗೆದು ಜಲನಾಳಗಳನ್ನು ಕೊಂದು ಮರಗಿಡಗಳನ್ನು ಲೂಟಿ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಆದರೆ ಪರಿಸರ ಸ್ನೇಹಿಯಾಗಿ ಸ್ಥಳೀಯ ಕೊಡವ ಸಂಸ್ಕೃತಿಯನ್ನು ಬಿಂಬಿಸುತ್ತ ಸ್ಥಳೀಯ ಅಡುಗೆಯನ್ನು ಅತಿಥಿಗಳಿಗೆ ಬಳಸುವ ಮೂಲಕ ಹೋಂಸ್ಟೇ ನಡೆಸುತ್ತಿರುವ ಸ್ಥಳೀಯರನ್ನು ಅವಮಾನಿಸಲಾಗುತ್ತಿದೆ ಮತ್ತು ಜನರ ಗಮನವನ್ನು ತಮ್ಮ ಲೂಟಿಯಿಂದ ಬೇರೆಡೆಗೆ ಸೆಳೆಯಲು ತಂತ್ರಗಾರಿಕೆ ಹೂಡಲಾಗುತ್ತಿದೆ. ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯ ಮತ್ತು ವಿಶ್ವ ಪಾರಂಪರಿಕ ತಾಣ ಕಾನೂನನ್ನು ಜಾರಿಗೆ ತಂದಿದೆ. ಆದರೆ ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ, ಬದಲಿಗೆ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮೇಲೆ ಹೇರಲಾಗುತ್ತಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲಾ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷವಿದೆ. ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಎನ್.ಯು.ನಾಚಪ್ಪ ಸ್ಪಷ್ಟಪಡಿಸಿದರು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೋಡಿರ ವಿನೋದ್, ಪಾಂಡಂಡ ಕಿಟ್ಟು, ಮಾತಂಡ ಕಂಬು ಉತ್ತಯ್ಯ, ಬಲ್ಲಚಂಡ ರವಿ, ಬಲ್ಲಚಂಡ ರಾಮಕೃಷ್ಣ, ಬೋಳಕಾರಂಡ ತಿಲಕ್, ಕೋದಂಡ ಸುರ, ಪಾಂಡಂಡ ಸುಧಿ, ಉದಿಯಂಡ ಚೆಂಗಪ್ಪ, ಚಂಬಂಡ ಜನತ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಚೊಳಂಡ ವಿಜು, ಪಾಂಡಂಡ ತೇಜ, ಬಲ್ಟಿಕಾಳಂಡ ರಂಜಿ, ಬಲ್ಟಿಕಾಳಂಡ ರಾಯ್, ಬಲ್ಟಿಕಾಳಂಡ ಮುದ್ದಯ್ಯ, ಚೋಳಂಡ ರಮೇಶ್, ಚೋಳಂಡ ವಿಜಯ, ಚೋಳಂಡ ಸುಗುಣ, ಮಾತಂಡ ಮಧು, ಸೋಮೆಯಂಡ ರೇಶ, ಕುಯ್ಮಂಡ ಸಂಜು, ನೆರ್ಪಂಡ ಜಿಮ್ಮಿ, ನೆರ್ಪಂಡ ಹರ್ಷ, ನೆರಪಂಡ ಅಸ್ತು, ನೆರ್ಪಂಡ ರಮೇಶ್, ಅಣ್ಣಡಿಯಂಡ ಮುದ್ದಯ್ಯ, ಮುಕ್ಕಾಟಿರ ಕಿರಣ್, ಅಳ್ಳಂಡ ರಾಜ, ಬೇಪಡಿಯಂಡ ಧನು, ಬೇಪಡಿಯಂಡ ಮಾಲೆ, ಕುಲ್ಲಚಂಡ ರಶಿ, ಪಾಲಚಂಡ ವಿನು, ಕರೋಟಿರ ಮನು, ಪಾಲೆಂಗಡ ಮುತ್ತು ಕುಂಞÂ, ಬಲ್ಲಚಂಡ ಸುಗುಣ, ಮನೆಯಪಂಡ ಧೀರಜ್, ಪಂದ್ಯಂಡ ವಾಸು, ಮುಕ್ಕಾಟಿರ ಕುಶಾಲಪ್ಪ, ಕೋಡಿರ ಅಪ್ಪಣ್ಣ, ಕೋಡಿರ ಉತ್ತಮ್, ಕೋಡಿರ ಪ್ರತಮ್, ಪಂದ್ಯಂದ ಕಾಶಿ, ಬಲ್ಲಚಂಡ ಚಂಗಪ್ಪ, ಬಲ್ಲಚಂಡ ರಂಜಿ, ಬಲ್ಲಚಂಡ ವಿಠಲ, ಬಲ್ಲಚಂಡ ಸುನೀಲ್, ಬಲ್ಲಚಂಡ ಸಂಪತ್, ಬಲ್ಲಚಂಡ ದಿನೇಶ್, ಪಳಂಗಂಡ ಮೋಹನ್, ಪೂಳಂಡ ಪಟ್ಟು, ಕುಲ್ಲಚಂಡ ಸದ, ಅಳ್ಮಂಡ ಲವ, ಚಂಗಂಡ ಪಟ್ಟು, ಕುಲ್ಲಚಂಡ ಸಬ, ಚೋಳಂಡ ನಿತಿನ್, ಪಂದ್ಯಂಡ ಧನು, ಕಂಡ್ರತಂಡ ಚೆಂಗಪ್ಪ, ಕೋಡಿರ ರಾಬಿನ್, ಕೋಡಿರ ಸಾಬ, ಕೋಡಿರ ತಮ್ಮಯ್ಯ, ಬೊಳಕಾರಂಡ ಮುದ್ದಪ್ಪ, ಮಾಳೇಟಿರ ಸುರೇಶ್, ಪಟ್ರಪಂಡ ಬೋಪಯ್ಯ, ಪಾಂಡಂಡ ರಘುಪತಿ, ಬಾಚೆಟ್ಟಿರ ಲೋಕೇಶ್, ಕೋಡಿರ ತಮ್ಮುಣಿ, ಕೋಡಿರ ಹ್ಯಾರಿ, ಕಾಂಗೀರ ಅರ್ಜುನ್, ನಂಬ್ಯಪಂಡ ರಂಜು, ನಡಿಕೇರಿಯಂಡ ಕಾರ್ಯಪ್ಪ, ಚಲ್ಮಂಡ ತಮ್ಮುಣಿ, ಚೆಲ್ಮಂಡ ಬೆಲ್ಲು, ಪಂದ್ಯಂಡ ಅಪ್ಪಣ್ಣ, ಪಂದ್ಯಂಡ ಲೋಕೇಶ್ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಸಿಎನ್‍ಸಿ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.