
ಮಡಿಕೇರಿ ಡಿ.4 NEWS DESK : ಸಾಮಾಜಿಕ ಜಾಲತಾಣದಲ್ಲಿ ವೀರ ಸೇನಾನಿಗಳಿಗೆ ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.6ರಂದು ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅಪಮಾನಿಸಿರುವ ಪ್ರಕರಣ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಇಡೀ ರಾಷ್ಟ್ರಕ್ಕೆ ಹಾಗೂ ಮಾಜಿ ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಇಬ್ಬರು ಮಹಾನ್ ಸೇನಾಧಿಕಾರಿಗಳು ಭಾರತೀಯ ಸೇನೆಗೆ ನೀಡಿದ ಕೊಡುಗೆಯನ್ನು ಮತ್ತು ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸದೆ ಅಗೌರವ ತೋರಿರುವುದು ಮಾಜಿ ಸೈನಿಕರ ಮನಸ್ಸಿಗೆ ನೋವನ್ನುಂಟುಮಾಡಿದೆ ಎಂದರು.
ತಮ್ಮ ಮೂಲ ಹೆಸರನ್ನು ಮರೆಮಾಚಿ ಬೇರೊಂದು ಜಾತಿಯ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದು, ಅವರ ದುರುದ್ದೇಶ ಏನು ಎಂದು ಸಮಗ್ರ ತನಿಖೆಯಿಂದಷ್ಟೇ ತಿಳಿಯಲು ಸಾಧ್ಯ. ಆದ್ದರಿಂದ ಇದರ ಬಗ್ಗೆ ಸವಿಸ್ತಾರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಡಿ.6 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ, ನಂತರ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಕೊಟ್ಟುಕತ್ತಿರ ಸೋಮಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸಿ.ಜಿ.ತಿಮ್ಮಯ್ಯ, ಸಹ ಕಾರ್ಯದರ್ಶಿ ಎಂ.ಕೆ.ನಾಚಪ್ಪ, ಸಂಚಾಲಕರಾದ ನಾಟೋಳಂಡ ಸೋಮಯ್ಯ ಹಾಗೂ ಸಹ ಸಂಚಾಲಕಿ ಚಂದನ ಉಪಸ್ಥಿತರಿದ್ದರು.









