ಮಡಿಕೇರಿ ಡಿ.10 NEWS DESK : ನಾಲ್ಕುನಾಡು ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಫೆ.8 ರಿಂದ 13 ರ ವರೆಗೆ ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ಪ್ರಥಮ ವರ್ಷದ ಕೊಡಗು ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಕಪ್ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಷನ್ ಪದಾಧಿಕಾರಿ ಪರವಂಡ ಸಿರಾಜ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ 6 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗೆ ಫೆ.8 ರಂದು ಬೆಳಿಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದ್ದು, ರಾಜಕೀಯ ವಲಯದ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಪಂದ್ಯಾವಳಿಯು ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಒಂದು ತಂಡದಲ್ಲಿ ಒಂದು ಜಮಾಅತ್ತಿಗೆ ಒಳಪಟ್ಟ ಕ್ರೀಡಾಪಟುಗಳಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ ಈ ನಿಯಮ ಮುಂದುವರೆಯಲಿದೆ ಎಂದು ಸಿರಾಜ್ ಹೇಳಿದರು. ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.55,555 ನಗದು ಮತ್ತು ಆಕರ್ಷಕ ಪಾರಿತೋಷಕ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.33,333 ನಗದು ಮತ್ತು ಆಕರ್ಷಕ ಪಾರಿತೋಷಕ ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ವಿವಿಧ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದೆಂದರು. ಡಿ.11 ರಿಂದ ತಂಡದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತ ತಂಡಗಳು ಜ.20ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 9632975327, 9611554301ನ್ನು ಸಂಪರ್ಕಿಸಬಹುದಾಗಿದೆ ಎಂದರು. ಫೆ.13ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಹಲವು ಗಣ್ಯವ್ಯಕ್ತಿಗಳು ಮತ್ತು ರಾಜಕೀಯ ನಾಯಕರು ಉಪಸ್ಥಿತರಿರುವರು. ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಸಿರಾಜ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಎನ್.ಎ.ಶಬೀರ್, ಸಿ.ಎ.ನೌಫಲ್, ಬಿ.ಎಸ್.ರಿಜ್ವಾನ್, ಕೆ.ಎ.ರಶೀದ್ ಹಾಗೂ ಎಂ.ಯು.ರಫೀಕ್ ಉಪಸ್ಥಿತರಿದ್ದರು. ::: ಸಂತಾಪ :::
ಇದೇ ಸಂದರ್ಭ ಪರವಂಡ ಸಿರಾಜ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ನಾಲ್ಕುನಾಡು ಕ್ರಿಕೆಟ್ ಅಸೋಸಿಯೇಷನ್ ಪರವಾಗಿ ಸಂತಾಪ ಸೂಚಿಸಿದರು.