ಮಡಿಕೇರಿ ಡಿ.10 NEWS DESK : ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವಿಸುವ ಮೂಲಕ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಕರೆ ನೀಡಿದ್ದಾರೆ. ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ‘ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಮನುಷ್ಯ ಜಾತಿ ತಾನೊಂದೇ ವಲಂ’ ಪಂಪ ಹೇಳಿರುವಂತೆ ಯಾವುದೇ ಜಾತಿ, ಧರ್ಮ, ಅಸಮಾನತೆ ಇಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಮಾನವ ಹಕ್ಕುಗಳನ್ನು ಉಳಿಸಿ ವಿಶ್ವ ಮಾನವರಾಗಬೇಕು ಎಂದು ಅವರು ಹೇಳಿದರು. ‘ಮಹಿಳೆಯರ ಮತ್ತು ಮಕ್ಕಳ ಶೋಷಣೆ, ಜಾತಿ ಹೆಸರಿನಲ್ಲಿ ನಿಂದನೆ ಮಾಡುವುದು ಮಾನವ ಹಕ್ಕು ಉಲ್ಲಂಘನೆ ಮಾಡಿದಂತೆ. ಆದ್ದರಿಂದ ಮಾನವ ಹಕ್ಕುಗಳನ್ನು ರಕ್ಷಿಸುವ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.’ ಶರಣರು, ದಾಸರು ಸೇರಿದಂತೆ ಎಲ್ಲರೂ ಮಾನವ ಹಕ್ಕುಗಳ ಉಳಿವಿಗಾಗಿ ಹೋರಾಡಿದ್ದಾರೆ. ಜಾತಿ ಪದ್ಧತಿ ಮತ್ತು ಮೌಢ್ಯತೆ ನಿರ್ಮೂಲನೆಗೆ ಶ್ರಮಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಹ ಸಂವಿಧಾನದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ್ದಾರೆ ಎಂದು ತಿಳಿಸಿದರು. ಭಾರತ ಸಂವಿಧಾನಕ್ಕೆ ಸಂಪೂರ್ಣ ನಂಬಿಕೆ ಮತ್ತು ನಿಷ್ಠೆ ಹೊಂದಿರಬೇಕು. ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಕರ್ತವ್ಯವನ್ನು ಸಂವಿಧಾನಾತ್ಮಕವಾಗಿ ನಿರ್ವಹಿಸಬೇಕು ಎಂದರು. ಯಾವುದೇ ತಾರತಮ್ಯವಿಲ್ಲದೇ ಗೌರವಿಸಬೇಕು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಿಚಾರಗಳಿಂದ, ಮಾತುಗಳಿಂದ ಅಥವಾ ನಡವಳಿಕೆ, ಕೃತ್ಯಗಳಿಂದ ಬೇರೆಯವರ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಮಾತನಾಡಿ ಜಾತಿ, ಧರ್ಮ, ಸಾಮಾಜಿಕ ಪಿಡುಗಿನ ಹೆಸರಿನಲ್ಲಿ ಬೇಧ ಭಾವವನ್ನು ಸಮಾಜದಲ್ಲಿ ಇಂದಿಗೂ ಕಾಣುತ್ತೇವೆ. ಇವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಕಾಣುತ್ತೇವೆ. ಸಮಾಜದಲ್ಲಿ ಪ್ರತಿಯೊಬ್ಬರನ್ನು ಸೌಜನ್ಯದಿಂದ ಕಾಣುವ ಮೂಲಕ ಸಮಾನತೆ, ಸ್ವಾತಂತ್ರ್ಯ, ಸಹಭಾಳ್ವೆ ನಡೆಸಬೇಕು. ಶ್ರೀ ಸಾಮಾನ್ಯರು ಎಲ್ಲರೂ ಒಂದೇ ಎಂದು ಭಾವಿಸಬೇಕು ಎಂದು ಉಪ ವಿಭಾಗಾಧಿಕಾರಿ ಅವರು ಒತ್ತಿ ಹೇಳಿದರು. ಜಿಲ್ಲಾಧಿಕಾರಿ ಅವರ ಕಾನೂನು ಸಲಹೆಗಾರರಾದ ಲೋಕೇಶ್ ಕುಮಾರ್ ಮಾತನಾಡಿ ಭಾರತ ಸಂವಿಧಾನದಲ್ಲಿ ಖಾತರಿ ಪಡಿಸಲಾಗಿರುವ ಜೀವನದ, ಸ್ವಾತಂತ್ರ್ಯದ, ಸಮಾನತೆ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳೇ ಮಾನವ ಹಕ್ಕುಗಳಾಗಿದೆ ಎಂದು ವಿವರಿಸಿದರು. ಎಲ್ಲಾ ಮಾನವ ಜೀವಿಗಳು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನರು ಮತ್ತು ಪ್ರತಿಯೊಬ್ಬರೂ ಯಾವುದೇ ತರಹದ ತಾರತಮ್ಯ ಇಲ್ಲದ ಹಕ್ಕುಗಳನ್ನು ಹಾಗೂ ಸ್ವಾತಂತ್ರ್ಯವನ್ನು ಹೊಂದುವ ಕಾನೂನು ಬದ್ಧ ಹಕ್ಕನ್ನು ಹೊಂದಿದ್ದಾರೆ ಎಂದು ನುಡಿದರು. ಜೀವಿಸುವ, ಸಮಾನತೆಯ, ವೈಯಕ್ತಿಕ ಸ್ವಾತಂತ್ರ್ಯ, ಶೋಷಣೆಯ ವಿರುದ್ಧ, ಗುಲಾಮಗಿರಿ ವಿರುದ್ಧ, ಶಿಕ್ಷಣದ ಹಕ್ಕು, ಅಭಿವೃದ್ಧಿ ಹಕ್ಕು ಹೀಗೆ ಪ್ರತಿಯೊಂದು ಹಕ್ಕುಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕುವೆಂಪು ಅವರ ವಾಣಿಯಂತೆ ಸರ್ವರಿಗೂ ಮಾನವ ಹಕ್ಕುಗಳ ಸಂರಕ್ಷಣೆ ಮಾನವ ಹಕ್ಕು ಆಯೋಗದ ಘೋಷಣೆಯಾಗಿದೆ ಎಂದು ತಿಳಿಸಿದರು. ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಸಪ್ಪ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಪ್ರಾಂಶುಪಾಲರಾದ ಪಿ.ಎಂ.ವಿಜಯ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ ನಿರ್ದೇಶಕರಾದ ಮಮತ, ಉಪ ವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಸುಪ್ರಿತಾ, ಶಾಲಾ ಶಿಕ್ಷಣ ಇಲಾಖೆಯ ಕೃಷ್ಣಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಶಿವಶಂಕರ, ಶಿರಸ್ತೆದಾರರಾದ ಪ್ರಕಾಶ್, ಮಧುಕರ, ಷಣ್ಮುಕ ಇತರರು ಇದ್ದರು. ಇನ್ನಷ್ಟು ಮಾಹಿತಿ:-ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದು, ಅದು ನಾಗರಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿರುವುದು. ಇವುಗಳಲ್ಲಿ ಅತಿ ಮುಖ್ಯವಾದವು ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ತಮ್ಮ ಆಯ್ಕೆಯ ವ್ಯಕ್ತಿ, ಕಲಿಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸಲು, ಆತ್ಮಸಾಕ್ಷಿ ಸ್ವಾತಂತ್ರ್ಯ, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಷ್ಯತೆ ಅಥವಾ ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ.
ಈ ಮಹತ್ತರ ಚಿಂತನೆಯ ಮೇರೆಗೆ ಮಾನವ ಹಕ್ಕುಗಳ ರಕ್ಷಣೆಗೆ ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ, 1993ರ ಅನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ರಚನೆ ಮಾಡಲಾಗಿದೆ. ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ. ರಾಜ್ಯದ ಯಾವುದೇ ಕಚೇರಿಯಿಂದಾಗಲೀ ಅಥವಾ ಸಂಸ್ಥೆಯಿಂದಾಗಲೀ ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ, ತೊಂದರೆಗೆ ಒಳಗಾದವರಾಗಲೀ ಅಥವಾ ಆತನ, ಆಕೆಯ ಪರವಾಗಿ ಬೇರೆ ಯಾರಾದರಾಗಲೀ ಅವರ ಕುಂದು ಕೊರತೆಗಳನ್ನು ಪರಿಹರಿಸಲು, ನ್ಯಾಯ ದೊರಕಿಸಿಕೊಳ್ಳಲು ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಬಹುದು. ಯಾವುದೇ ಖರ್ಚಿಲ್ಲದೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ‘ಮಾನವ ಹಕ್ಕು ರಕ್ಷಣೆ’ ಮೊಬೈಲ್ ಆ್ಯಪ್-ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ಬಳಸಬಹುದು. ಕೆಎಸ್‍ಎಚ್‍ಆರ್‍ಸಿ ವೆಬ್‍ಸೈಟ್ https://kshrc.karnataka.gov.in, ದೂರು ನಿರ್ವಹಣಾ ವ್ಯವಸ್ಥೆ-ಆನ್‍ಲೈನ್ ಮುಖಾಂತರ www.hrcnet.nic.in ಇವುಗಳಲ್ಲದೇ ಸ್ಪಷ್ಟವಾಗಿ, ಸರಳವಾಗಿ, ಸಂಪೂರ್ಣ ವಿವರಗಳನ್ನೊಳಗೊಂಡ ಒಂದು ಪತ್ರದ ಮುಖಾಂತರ ಅಥವಾ ಆಯೋಗ ನಿಗದಿಪಡಿಸಿರುವ ಸರಳ ನಮೂನೆ ಮುಖಾಂತರ ದೂರು ಸಲ್ಲಿಸಬಹುದು. ಸಹಾಯವಾಣಿ- ಶುಲ್ಕರಹಿತ ದೂ.ಸಂ. 1800-4252-3333 ನ್ನು ಸಂಪರ್ಕಿಸಬಹದು ಎಂದು ಪ್ರಕಟಣೆ ತಿಳಿಸಿದೆ.