




ಮಡಿಕೇರಿ ಡಿ.19 NEWS DESK : ಸಿ ಮತ್ತು ಡಿ ಭೂಮಿ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ.20 ರಂದು ರೈತರು ಮಡಿಕೇರಿಯಲ್ಲಿ ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಸೋಮವಾರಪೇಟೆ, ಶಾಂತಳ್ಳಿ, ಭಾಗಮಂಡಲ ಮತ್ತಿತರೆಡೆ ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರ ಭೂಮಿ ಕಸಿದುಕೊಳ್ಳುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ರಾಜ್ಯದಲ್ಲಿ ರೈತ ವಿರೋಧಿ ಸರಕಾರ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು. ಇತ್ತೀಚೆಗೆ ಅರಣ್ಯ ಸಚಿವರು ಜಿಲ್ಲೆಯ ಕೆಲವು ಪ್ರದೇಶವನ್ನು ಎಲಿಫೆಂಟ್ ಕಾರಿಡಾರ್ ಎಂದು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಕಳೆದ 30 ವರ್ಷಗಳಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆಯೇ ಹೊರತು ಇದು ಆನೆಗಳಿರುವ ಪ್ರದೇಶವಲ್ಲ. ಕಾಡಾನೆಗಳು ನುಸುಳದಂತೆ ಇಲ್ಲಿಯವರೆಗೆ ರೈಲ್ವೆ ಕಂಬಿ ಬೇಲಿ ಅಥವಾ ಸೋಲಾರ್ ಬೇಲಿ ಅಳಿವಡಿಸುವ ಕೆಲಸವನ್ನು ಸರಕಾರ ಮಾಡಿಲ್ಲ. ಇದು ಕೂಡ ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಆದ್ದರಿಂದ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ಪಕ್ಷ ಭಾಗಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.