ಮಡಿಕೇರಿ ಡಿ.19 NEWS DESK : ಕೊಡಗು ಜಿಲ್ಲೆಯಲ್ಲಿ ಗೋಕಳ್ಳತನ, ಗೋವುಗಳ ಅಕ್ರಮ ಸಾಗಾಟ ಮತ್ತು ಗೋಹತ್ಯೆ ಪ್ರಕರಣಗಳು ಮಿತಿ ಮೀರಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಹಾಗೂ ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ.ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಗೋವುಗಳ ಕಳ್ಳತನ ನಿರಂತರವಾಗಿದ್ದು, ಪೊಲೀಸ್ ಇಲಾಖೆ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಜನರು ಸಹನೆ ಕಳೆದುಕೊಳ್ಳುವ ಮೊದಲು ಗೋವುಗಳ ಕಳ್ಳರನ್ನು ನಿಯಂತ್ರಿಸಬೇಕು. ತಪ್ಪಿದಲ್ಲಿ ತೀವ್ರ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಸರಕಾರವಿದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಕಾವೇರಿ ನದಿ ಉಗಮವಾಗುವ ಕೊಡಗಿನಲ್ಲಿ ಬ್ರಿಟಿಷರ ಕಾಲದಿಂದಲೂ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಗೋವುಗಳ ಕಳ್ಳರು ಮನೆಗಳ ಕೊಟ್ಟಿಗೆಗೇ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಅವರ ಮನೆಯ ಕೊಟ್ಟಿಗೆಗೆ ಇಂದು ನಸುಕಿನಲ್ಲಿ ಸುಮಾರು ಮೂರೂವರೆ ಗಂಟೆ ವೇಳೆಯಲ್ಲಿ ಗೋವುಗಳ ಕಳ್ಳರು ನುಗ್ಗಿ ಒಂದು ಹಸುವನ್ನು ಕದ್ದೊಯ್ದಿದ್ದಾರೆ. ಘಟನೆ ನಡೆದ ತಕ್ಷಣ ಮತ್ತು ಬೆಳಿಗ್ಗೆ ಮತ್ತೊಮ್ಮೆ ಪೊಲೀಸರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರೂ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷಿಸಿದ್ದಾರೆ. ಸಿಸಿ ಕ್ಯಾಮರಾ ಸೆರೆ ಹಿಡಿದಿರುವ ದೃಶ್ಯಾವಳಿಗಳ ಆಧಾರದಲ್ಲಿ ಗೋವು ಕಳ್ಳರನ್ನು ಬಂಧಿಸುವ ಪ್ರಯತ್ನವನ್ನು ಕೂಡ ಮಾಡಿಲ್ಲ ಎಂದು ಟೀಕಿಸಿದರು. ಗಾಂಜಾ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿರುವ ಪೊಲೀಸರು ಗೋವುಗಳ ಕಳ್ಳತನ ಮತ್ತು ಗೋಹತ್ಯೆ ಪ್ರಕರಣಗಳನ್ನು ಕೂಡ ನಿಯಂತ್ರಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ ಜನ ಸಹನೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
::: ಇಸ್ಪೀಟ್ ದಂಧೆ, ಅಕ್ರಮ ಮದ್ಯ ಮಾರಾಟ :::
ಜಿಲ್ಲೆಯ ವಿವಿಧೆಡೆ ಇಸ್ಪೀಟ್ ದಂಧೆ ಮಿತಿ ಮೀರಿದೆ, ಅಕ್ರಮ ಮರಳು, ಗೋವುಗಳ ಸಾಗಾಟವಾಗುತ್ತಿದೆ. ಅಂಗಡಿ ಅಂಗಡಿಗಳಲ್ಲಿ ಕಾನೂನು ಬಾಹಿರವಾಗಿ ದುಬಾರಿ ದರಕ್ಕೆ ಮದ್ಯ ಮಾರಾಟವಾಗುತ್ತಿದೆ. ಆದರೆ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದಂಧೆಕೋರರು, ದರೋಡೆಕೋರರು ಹಾಗೂ ಗೋಹತ್ಯೆ ಮಾಡುವವರು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ದೂರು ನೀಡುವವರ ವಿರುದ್ಧ ಸರಕಾರದ ಹೆಸರು ಹೇಳಿಕೊಂಡು ದರ್ಪ ತೋರುತ್ತಿದ್ದಾರೆ. ದೂರು ನೀಡಲು ಭಯ ಪಡುವಂತಹ ಪರಿಸ್ಥಿತಿ ರಾಜ್ಯದಲ್ಲಿದೆ. ಇದಕ್ಕೆ ಗೃಹ ಸಚಿವರ ಕಾರ್ಯವೈಖರಿಯೇ ಕಾರಣವೆಂದು ಕೆ.ಜಿ.ಬೋಪಯ್ಯ ಆರೋಪಿಸಿದರು.
::: ಬಾಂಗ್ಲಾ ವಲಸಿಗ ಕಾರ್ಮಿಕರ ಬಗ್ಗೆ ಎಚ್ಚರ :::
ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ ವಲಸಿಗರು ಕಾರ್ಮಿಕರಾಗಿ ತೋಟಗಳಲ್ಲಿ ಸೇರಿಕೊಳ್ಳುತ್ತಿದ್ದಾರೆ. ಗೋವುಗಳ ಸಾಗಾಟ ಮತ್ತು ಹತ್ಯೆ ಪ್ರಕರಣಗಳಲ್ಲಿ ಇವರುಗಳನ್ನು ಶಾಮೀಲು ಮಾಡಿಕೊಳ್ಳಲಾಗುತ್ತಿದೆ. ತೋಟದ ಮಾಲೀಕರುಗಳು ವಲಸೆ ಕಾರ್ಮಿಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಮೂಲ ದಾಖಲಾತಿಗಳನ್ನು ಪರಿಶೀಲಿಸಬೇಕು ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಐದು ವರ್ಷಗಳಲ್ಲಿ ಬಾಂಗ್ಲಾ ವಲಸಿಗರು ದೊಡ್ಡ ಸಮಸ್ಯೆ ಆಗಲಿದ್ದಾರೆ, ಕೊಡಗು ಜಿಲ್ಲೆಗೆ ಭವಿಷ್ಯ ಇಲ್ಲದಂತ್ತಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಮಾತನಾಡಿ ಕೆ.ನಿಡುಗಣೆ ಗ್ರಾಮದಲ್ಲಿರುವ ತಮ್ಮ ಮನೆಯ ಕೊಟ್ಟಿಗೆಯಲ್ಲಿದ್ದ 12 ಜಾನುವಾರುಗಳ ಪೈಕಿ ಎರಡು ಹಸುಗಳನ್ನು ಕಳ್ಳತನ ಮಾಡುವ ಪ್ರಯತ್ನ ನಡೆದಿದೆ. ಒಂದು ಹಸು ತಪ್ಪಿಸಿಕೊಂಡಿದ್ದು, ಮತ್ತೊಂದು ಹಸುವನ್ನು ಕದ್ದೊಯ್ದಿದ್ದಾರೆ. ನಸುಕಿನ ಜಾವ ಸುಮಾರು ಮೂರೂವರೆ ಗಂಟೆಗೆ ಕೊಟ್ಟಿಗೆಯಲ್ಲಿ ಶಬ್ಧ ಕೇಳಿ ಬಂದಿದ್ದು, ನಾನು ಹೋಗಿ ನೋಡುವ ಸಂದರ್ಭ ಪಿಕ್ ಅಪ್ ವಾಹನದಲ್ಲಿ ಒಂದು ಹಸುವನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ನನ್ನ ಪುತ್ರನಿಗೆ ಮಾಹಿತಿ ನೀಡಿ ಗೋವು ಕಳ್ಳರನ್ನು ವಾಹನದಲ್ಲಿ ಹಿಂಬಾಲಿಸುವಂತೆ ತಿಳಿಸಿದೆ. ಆದರೆ ಪುತ್ರ ಓಡುವ ಸಂದರ್ಭ ಬಿದ್ದು ಕೈಮೂಳೆ ಮುರಿತವಾಗಿದೆ ಎಂದು ವಿವರಿಸಿದರು.
ಗೋವು ಕಳ್ಳತನವಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಸೂಕ್ತ ಸ್ಪಂದನೆ ದೊರೆತ್ತಿಲ್ಲ. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ನಮ್ಮ ಮನೆಯಿಂದ ಕಳ್ಳತನವಾದ ಹಸುವಿಗೆ ಮತ್ತು ಕೈಮುರಿತಕ್ಕೊಳಗಾದ ನನ್ನ ಪುತ್ರನಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಕಾವೇರಿ ನದಿಯ ಹುಟ್ಟೂರು ಕೊಡಗಿನಲ್ಲಿ ಗೋಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸದ ಸರಕಾರ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲವೆಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಅಕ್ರಮ ದಂಧೆಗಳ ವಿರುದ್ಧ ದೂರು ನೀಡುವವರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿದೆ. ಗೋವುಗಳ ಸಾಗಾಟ ಮತ್ತು ಗೋಹತ್ಯೆಯನ್ನು ತಡೆಯದಿದ್ದಲ್ಲಿ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್ ಹಾಗೂ ಪ್ರಮುಖರಾದ ಮಾಚಿಮಾಡ ರವೀಂದ್ರ ಉಪಸ್ಥಿತರಿದ್ದರು.