ಮಡಿಕೇರಿ ಡಿ.25 NEWS DESK : ಹುಲಿಯೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ನಿಟ್ಟೂರು ಸಮೀಪದ ತಟ್ಟಕೆರೆ ಪೈಸಾರಿಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ರಾಜನ್ (48) ಎಂಬುವವರೇ ಹುಲಿ ದಾಳಿಗೊಳಗಾದವರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಹುಲಿ ದಾಳಿ ಮಾಡಿ ಕಿವಿ ಮತ್ತು ತಲೆಯ ಭಾಗಕ್ಕೆ ಘಾಸಿಗೊಳಿಸಿದೆ. ಅದೃಷ್ಟವಶಾತ್ ಕಿರುಚಾಟ ಕೇಳಿ ಹುಲಿ ಅಲ್ಲಿಂದ ಕಾಲ್ಕಿತ್ತಿದೆ. ನಂತರ ಗಾಯಾಳು ರಾಜನ್ ಅವರನ್ನು ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ರಾಜನ್ ಅವರ ಆರೋಗ್ಯ ವಿಚಾರಿಸಿದರು. ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹುಲಿ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಆದಿಕಾರಿಗಳಿಗೆ ಸೂಚನೆ ನೀಡಿದರು. ಹುಲಿ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಉಪಟಳ ನೀಡುತ್ತಿರುವ ಹುಲಿಯನ್ನು ತಕ್ಷಣ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.