ವಿರಾಜಪೇಟೆ NEWS DESK ಡಿ.25 : ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್‌ನಲ್ಲಿ ಶಾಂತಿಧೂತ ಯೇಸುಕ್ರಿಸ್ತರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಪ್ರಧಾನ ಧರ್ಮಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್ ಹಾಗೂ ಸಹ ಧರ್ಮ ಗುರುಗಳಾದ ರೆ.ಫಾ.ಮದಲೈ ಮುತ್ತು ಅವರುಗಳ ಸಾನಿಧ್ಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೈಬಲ್ ಪಠಣ ಹಾಗೂ ಧರ್ಮಕೇಂದ್ರದ ಗಾಯನ ವೃಂದದಿಂದ ಕ್ಯಾರಲ್ ಗಾಯನ ನಡೆಯಿತು. ಪ್ರಧಾನ ಧರ್ಮಗುರುಗಳು ಬಾಲಯೇಸುವಿನ ಮೂರ್ತಿಯನ್ನು ದೇವಾಲಯದಲ್ಲಿ ನಿರ್ಮಿಸಲಾದ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಿದರು. ನಂತರ ಬಲಿಪೂಜೆ ಮತ್ತು ಯೇಸುಕ್ರಿಸ್ತರ ದಿವ್ಯ ಗಾಯನದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರುಗಳು ಧರ್ಮ ಸಂದೇಶದಲ್ಲಿ ಪ್ರೀತಿ ಮತ್ತು ಶಾಂತಿಯ ಸಮಾಜ ನಿರ್ಮಾಣಕ್ಕಾಗಿ ಕರೆ ನೀಡಿದರು. ನೆರೆದಿದ್ದವರು ಕೇಕ್ ಹಂಚಿ ಪರಸ್ಪರ ಶುಭ ಸಂದೇಶವನ್ನು ವಿನಿಮಯ ಮಾಡಿಕೊಂಡು ಹಬ್ಬವನ್ನು ಸಂಭ್ರಮವನ್ನು ಆಚರಿಸಿದರು. ::: ಪೊನ್ನಣ್ಣ ಭೇಟಿ :::
ಕ್ರಿಸ್‌ಮಸ್ ಅಂಗವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಂತ ಅನ್ನಮ್ಮ ಚರ್ಚ್‌ಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಸರ್ವಧರ್ಮಗಳ ಆಚರಣೆಯಲ್ಲಿ ಸರ್ವರು ಭಾಗಿಗಳಾಗಿ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚಿಸುವಂತಾಗಬೇಕು ಎಂದರು.
ಪುರಸಭೆಯ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ಎಸ್.ಹೆಚ್.ಮತೀನ್ ಮತ್ತಿತರರು ಉಪಸ್ಥಿತರಿದ್ದರು.











