ವಿರಾಜಪೇಟೆ ಜ.2 NEWS DESK : ವಿರಾಜಪೇಟೆ ಮಲೆತಿರಿಕೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ರಾತ್ರಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಆಚರಿಸಲಾಯಿತು. ಡಿ.25 ರಂದು ಕ್ಷೇತ್ರ ಪಾಲಕ ಗುಳಿಗನ ಪೂಜೆಯೊಂದಿಗೆ ಆರಂಭವಾಯಿತು. ಡಿ.26 ರಂದು ಧ್ವಜಾರೋಹಣ ಮತ್ತು ಮಂಡಲ ಪೂಜೆ ನಡೆಯಿತು. ಡಿ.30, 31 ರಂದು ಸಂಜೆ ವಿಶೇಷ ಪೂಜೆಗಳು ನಡೆಯಿತು. ಜ.1 ರಂದು ಮುಂಜಾನೆ ಗಣಪತಿ ಹೋಮ, ಲಕ್ಷ್ಮೀ ಪೂಜೆ, ಸರಸ್ವತಿ ಪೂಜೆ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನಡೆಯಿತು. ನಂತರ ತುಲಾಭಾರ ಸೇವೆ, ಶ್ರೀ ಅಯ್ಯಪ್ಪ ನ ಮಾಲಧಾರಿಗಳಿಂದ ಲಕ್ಷಾರ್ಚನೆ ಸೇವೆ ಜರುಗಿತು. ಪಡಿಹಾಡು ನಂತರ ಶ್ರೀ ಅಯ್ಯಪ್ಪ ಸ್ವಾಮಿಗೆ ಮಾಹಾಪೂಜೆ, ಮಹಾಮಂಗಳಾರತಿ ಸೇವೆ ನಡೆಯಿತು. ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ಬಾಲ ಅಯ್ಯಪ್ಪನ ಚಲನವಲನ ಉಳ್ಳ ಉತ್ಸವ ಮೂರ್ತಿಯ ಶೋಭಾಯತ್ರೆ ನಡೆಯಿತು. ಶೋಭಾಯಾತ್ರೆಗೆ ಮತ್ಸ್ಯ ಅವತಾರದ ಸ್ತಬ್ಧಚಿತ್ರವು, ಕೇರಳದ ಚಂಡೆಮದ್ದಳೆ, ಶ್ರೀ ಅಯ್ಯಪ್ಪ ಮಾಲಾಧಾರಿಗಳಿಂದ ಭಜನೆ ಶೋಭಾಯಾತ್ರೆಗೆ ಮೆರೆಗು ನೀಡಿತು. ಮೆರವಣಿಗೆಯು ತೆಲುಗರ ಬೀದಿ, ಜೈನರ ಬೀದಿ, ಎಫ್.ಎಂ.ಸಿ ರಸ್ತೆ ಮಲಬಾರ್ ರಸ್ತೆಯಲ್ಲಿ ಸಾಗಿ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಕೊನೆಗೊಂಡಿತ್ತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ ಶ್ರೀ ಅಯ್ಯಪ್ಪ ವೃತ ಮಾಲಾಧಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ