ಮಡಿಕೇರಿ ಜ.6 NEWS DESK : ಕೂರ್ಗ ಬೈ ರೇಸ್ ಮತ್ತು ಜಮ್ಮ ಹಿಡುವಳಿಯ ಆಧಾರದಲ್ಲಿ ಬಂದಿರುವ ಕೋವಿಯ ವಿಶೇಷ ಹಕ್ಕುದಾರಿಕೆಯನ್ನ ಕೊಡವರು ಶಾಶ್ವತವಾಗಿ ಉಳಿಸಿಕೊಳ್ಳುವತ್ತ ಸಂವಿದಾನ ಬದ್ಧತೆ ರೂಪಿಸಿಕೊಳ್ಳಬೇಕಾದದ್ದು ಇಂದಿನ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಪ್ರತಿಪಾದಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಜೆಸಿಐ ಪೊನ್ನಂಪೇಟೆ ಸಂಸ್ಥೆ ಸಹಯೋಗದಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಕಾಡೆಮಿಯ ಪ್ರಥಮ ಬಾರಿಯ ತೋಕ್ ನಮ್ಮೆ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಯ ಬಳಕೆ ಹಾಗೂ ಪಾವಿತ್ರ್ಯತೆಯ ಬಗ್ಗೆ ತಿಳಿದುಕೊಳ್ಳುವುದು ಮತ್ತು ಮುಂದಿನ ಪೀಳಿಗೆಗೆ ತಿಳಿ ಹೇಳುವುದು ನಮ್ಮ ಕರ್ತವ್ಯ ಎಂದರು. ಜಬ್ಬೂಮಿ ಚಾಎಇಟೇಬಲ್ ಟ್ರಸ್ಟ್ ಮುಖ್ಯಸ್ಥ ಚೊಟ್ಟೆಕಮಾಡ ರಾಜಿವ್ ಬೋಪಯ್ಯ ಮಾತನಾಡಿ, ಅನಾದಿಕಾಲದಿಂದ ಬಂದಿರುವ ಸಂಪ್ರದಾಯ ಹಾಗೂ ಜೀವನ ಕ್ರಮವನ್ನು ಬದ್ದತೆಯಿಂದ ಪರಿಪಾಲಿಸುತ್ತಿರುವ ಕೊಡವ ಭಾಷಿಕ ಜನಾಂಗಗಳು ಒಗ್ಗಟ್ಟಿನಿಂದ ಹಕ್ಕುದಾರಿಕೆಯನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದರು. ವಕೀಲ ಬಲ್ಯಮಡ ಬಿ.ಮಾದಪ್ಪ “ಕೊಡವಡ ತೋಕ್’ರ ಹಕ್ಕ್’ದಾರಿಕೆ ಪಿಞ್ಞ ರಕ್ಷಣೆ” ಎಂಬ ವಿಚಾರವಾಗಿ ಪ್ರಬಂಧ ಮಂಡಿಸಿದರು. ಕೊಡವ ಸೇರಿದಂತೆ ಮೂಲನಿವಾಸಿ ಕೊಡವ ಭಾಷಿಕರಿಗೆ ತಮ್ಮ ತಾಯ್ನೆಲದಲ್ಲಿ ಇರುವ ಹಕ್ಕುದಾರಿಕೆ, ಸಂಪ್ರದಾಯ ಮತ್ತು ಉಡುಗೆ ತೊಡಗೆಗಳನ್ನು ಕಾನೂನಾತ್ಮಕವಾಗಿ ರಕ್ಷಿಸಿಕೊಳ್ಳಬೇಕಾಗಿದೆ ಎಂದರು. ಕೊಡವರಿಗಿರುವ ತಾಯ್ನೆಲ ಕೊಡಗು ಮಾತ್ರ. ಕೊಡವರ ಹಕ್ಕುದಾರಿಗೆ, ಸಂಪ್ರದಾಯಗಳು ಈ ನೆಲದ ಅಸ್ಮಿತೆಯಾಗಿದ್ದು, ಇಂದಿನ ಸ್ಥಿತಿಗತಿಗೆ ಹೊಂದಿಕೊಂಡಂತೆ ಕೊಡವರು ಎಲ್ಲಿಯೇ ಇದ್ದರು ತಮ್ಮತನವನ್ನು ಕಾಯ್ದುಕೊಳ್ಳುತ್ತಿರುವುದು ಶ್ಲಾಘನೀಯ. ಕೊಡವರಿಗೆ ತಮ್ಮದೇ ಆದ ಸಂಸ್ಕೃತಿ, ಸಂಪ್ರದಾಯಗಳು ಇದೆ ಎಂದರು. ಕೊಡವರಿಗೆ ಕೋವಿಯ ಹಕ್ಕುದಾರಿಕೆ ಅನಾದಿಕಾಲದಿಂದಲೂ ಬಂದಿರುವಂತದ್ದು. ಕೊಡವರ ಧೈರ್ಯ-ಸ್ಥೈರ್ಯದೊಂದಿಗೆ ಶಿಸ್ತು, ಶಿಷ್ಟಾಚಾರದ ಭಾಗವಾಗಿ ಲಭ್ಯವಾದ ಕೋವಿಯ ಹಕ್ಕುದಾರಿಕೆ ಸಂಸ್ಕೃತಿಯ ಭಾಗವಾಗಿದ್ದು, ಇದನ್ನು ಶಾಸನಬದ್ದಗೊಳಿಸುವುದರ ಮೂಲಕ ರಕ್ಷಿಸಿಕೊಳ್ಳಬೇಗಿದೆ ಎಂದರು. ವೇದಿಕೆಯಲ್ಲಿ ಜೆಸಿಐ ಪೊನ್ನಂಪೇಟೆ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ, ಕಾವೇರಿ ಅಸೋಸಿಯೇಶನ್ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ, ಅಖಿಲ ಅಮ್ಮ ಕೊಡವ ಸಮಾಜ ಬಾನಂಡ ಪ್ರಥ್ಯು, ಕಳಪಂಡ ಸಿ.ಸುದೀರ್, ಜೆಸಿಐ ವಲಯ ನಿರ್ದೇಶಕ ಪಾರುವಂಗಡ ದಿಲನ್ ಚಂಗಪ್ಪ, ಯೋಜನಾ ನಿರ್ದೇಶಕ ಚೋನಿರ ಬಿ.ಸೋಮಣ್ಣ, ಜೆಸಿಐ ನಿರ್ದೇಶಕ ವಲಯ 14 ಅಪ್ಪಂಡೇರಂಡ ದಿನು, ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಅಕಾಡೆಮಿ ಸದಸ್ಯರಾದ ಕೊಂಡಿಜಮ್ಮನ ಬಾಲಕೃಷ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಯಂದಿರ ಶಿವಾಜಿ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಕಂಬೆಯಂಡ ಡೀನ ಬೋಜಣ್ಣ, ಜೆಸಿಐ ಸದಸ್ಯರು ಹಾಜರಿದ್ದರು.