ಬೆಂಗಳೂರು NEWS DESK ಜ.7 : ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಮಾನ ನಿಲ್ದಾಣ ಮೊದಲ ಹಂತದ ವಿಸ್ತರಣೆಗಾಗಿ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಧ್ಯ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ನಿವಾಸ “ಕಾವೇರಿ”ಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಮವಾರ ಬೆಳಗ್ಗೆ ಭೇಟಿ ಮಾಡಿದ ಸಂಸದರು ಮನವಿ ಸಲ್ಲಿಸಿ, ಮೈಸೂರು ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃವೃದ್ಧಿ ಯೋಜನೆಗಳು ಹಾಗೂ ಇತರೆ ವಿಷಯಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿದೆ ಹಾಗೂ ಇತ್ತೀಚೆಗೆ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ, ಉದ್ಯಮಿಗಳಿಗೆ, ಅನುಕೂಲವಾಗಲು ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಮಾಡಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ 46 ಎಕರೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಮಧ್ಯಪ್ರವೇಶಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಯದುವೀರ್ ಮನವಿ ಮಾಡಿದರು. ಈಗಾಗಲೇ ಭೂ ಸ್ವಾಧೀನಕ್ಕೆ ವಿಶೇಷ ಜಿಲ್ಲಾಧಿಕಾರಿಗಳ ಒಪ್ಪಿಗೆ ದೊರೆತಿದೆ. ಭೂ ಮಾಲೀಕರಿಗೆ ವೆಚ್ಚ ಪಾವತಿಸಿದ ನಂತರ ಹಸ್ತಾಂತರ ಪ್ರಕ್ರಿಯೆ ಸರಾಗವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ನಂತರ ಭೂಮಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕು ಎಂದು ಸಂಸದರು ಇದೇ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು. ಕಾಲುವೆ, ವಿದ್ಯುತ್ ತಂತಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮನವಿ ಉದ್ದೇಶಿತ ವಿಮಾನ ನಿಲ್ದಾಣದಲ್ಲಿ, ನೀರಾವರಿ ಕಾಲುವೆ, ಓವರ್ ಹೆಡ್ ವಿದ್ಯುತ್ ತಂತಿಗಳಿವೆ, ಇವುಗಳನ್ನು ಕೂಡ ರಾಜ್ಯ ಸರ್ಕಾರ ತೆರವುಗೊಳಿಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಂಸದರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ. ಭೂಮಿ ಹಸ್ತಾಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಯದುವೀರ್ ಮನವಿ ಸಲ್ಲಿಸಿದರು. ದೇವರಾಜ ಮಾರುಕಟ್ಟೆ ಕಟ್ಟಡ ಮತ್ತು ಲ್ಯಾಂಡ್ಸ್ ಡೌನ್ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿವೆ. ಮತ್ತು ಮೈಸೂರಿಗೆ ಇವು ಕಳಶಪ್ರಾಯವಾಗಿವೆ. ಇವುಗಳನ್ನು ಕೆಡವದೇ ಉಳಿಸಿಕೊಂಡು ಸಂರಕ್ಷಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಯದುವೀರ್ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಮೈಸೂರಿನಲ್ಲಿ ಉದ್ದೇಶಿತ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA)ಗೆ ಭೂಸ್ವಾಧೀನ ಪ್ರಕ್ರಿಯೆ ಭಾರಿ ವಿಳಂಬವಾಗಿದೆ. ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಸಂಸದ ಯದುವೀರ್ ಮನವಿ ಪತ್ರ ಸಲ್ಲಿಸಿದರು. ಕ್ರೀಡೆಗೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅನನ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಮೈಸೂರು ಖ್ಯಾತಿಯನ್ನು ಪಸರಿಸಲು ವಿಶ್ವದರ್ಜೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಇದರಿಂದ ಮೈಸೂರಿನಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ. ರಾಜ್ಯದ ಆರ್ಥಿಕತೆಗೂ ನೆರವಾಗಲಿದೆ ಎಂದು ಯದುವೀರ್ ವಿವರಿಸಿದರು. ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಮೈಸೂರಿನಲ್ಲಿ ನಿರ್ಮಾಣವಾದರೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ಹೀಗಾಗಿ ಕ್ಷಿಪ್ರಗತಿಯಲ್ಲಿ ಭೂ ಸ್ವಾಧೀನ, ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯದುವೀರ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ, ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆದ ಎಚ್.ಸಿ.ಮಹದೇವಪ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.